Thu. Nov 5th, 2026

ವಿಧಾನಸೌಧದಲ್ಲಿ ಕನ್ನಡ ನಾಮಫಲಕಗಳ ಅನಾವರಣ: ಆಡಳಿತದಲ್ಲಿ ಕನ್ನಡ ಕಡ್ಡಾಯಕ್ಕೆ ಸರ್ಕಾರ ಮುನ್ನುಡಿ

Share this with Friends

ಬೆಂಗಳೂರು: ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧದ ಸಚಿವ ಸಂಪುಟ ಸಭೆ ಕೊಠಡಿಯ ಕಾರಿಡಾರ್‌ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನವಾಗಿ ಅಳವಡಿಸಲಾಗಿರುವ ಕನ್ನಡ ನಾಮಫಲಕಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು.

ರಾಜ್ಯದ ಪ್ರತಿಯೊಂದು ಸರ್ಕಾರಿ ಕಾರ್ಯಾಲಯದಲ್ಲಿಯೂ ಆಡಳಿತ ಭಾಷೆಯಾಗಿ ಕನ್ನಡದ ಸಮರ್ಪಕ ಅನುಷ್ಠಾನ ಹಾಗೂ ದೃಶ್ಯ ರೂಪದಲ್ಲಿಯೂ ಭಾಷಾ ಅಸ್ಮಿತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಮತ್ತು ಪ್ರಾತಿನಿಧ್ಯದ ಕುರಿತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ 71ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕರ್ನಾಟಕದ ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ‘ನಾಡಧ್ವಜ’ ಸ್ಥಾನಮಾನ ನೀಡಲು ಮುಂದಾಗಿದ್ದು, ಈ ಕುರಿತು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಿದೆ. ಇದರ ಬೆನ್ನಲ್ಲೇ, ಸಾರ್ವಜನಿಕವಾಗಿ ಗೋಚರಿಸುವ ಎಲ್ಲಾ ನಾಮಫಲಕಗಳಲ್ಲಿ ಶೇ. 60ರಷ್ಟು ಭಾಗ ಕನ್ನಡ ಕಡ್ಡಾಯಗೊಳಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಜಾರಿಗೆ ತರುತ್ತಿವೆ.

ವಿಧಾನಸೌಧ ಹಾಗೂ ವಿಕಾಸಸೌಧಗಳ ಮೂಲೆಮೂಲೆಗಳಲ್ಲಿ ಕನ್ನಡದ ಘೋಷವಾಕ್ಯಗಳು ಮತ್ತು ನಾಮಫಲಕಗಳನ್ನು ಅಳವಡಿಸುವ ಮೂಲಕ ಈ ಸೌಧಗಳನ್ನು ‘ಕನ್ನಡದ ಹೆಮ್ಮೆಯ ಕೇಂದ್ರಗಳನ್ನಾಗಿ’ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಮ್ಮಿಕೊಂಡಿದ್ದು, ಅದರ ಮೊದಲ ಹಂತವಾಗಿ ಇಂದು ಸಚಿವ ಸಂಪುಟ ಕೊಠಡಿಯ ಕಾರಿಡಾರ್‌ನಲ್ಲಿ ಫಲಕಗಳನ್ನು ಅನಾವರಣಗೊಳಿಸಲಾಗಿದೆ.

ಈ ಮಹತ್ವದ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ರಿಜ್ವಾನ್ ಅರ್ಷದ್, ಹೆಚ್‌.ಸಿ. ಬಾಲಕೃಷ್ಣ, ಟಿ. ರಘುಮೂರ್ತಿ, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 


Share this with Friends

Related Post