Thu. Nov 5th, 2026

ಬರಪೀಡಿತ ರೈತರಿಗೆ ಗರಿಷ್ಠ 5,000 ರೂ. ಪರಿಹಾರ ಘೋಷಣೆ: ಮೊದಲ ಕಂತಿನ ಹಣ ಬಿಡುಗಡೆ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸಿರುವ ಕರ್ನಾಟಕ ಸರ್ಕಾರ, ಪ್ರತಿ ಬರಪೀಡಿತ ರೈತನಿಗೆ ಇನ್‌ಪುಟ್ ಸಬ್ಸಿಡಿ ರೂಪದಲ್ಲಿ ಗರಿಷ್ಠ 5,000 ರೂ. ಪರಿಹಾರ ನೀಡಲು ತೀರ್ಮಾನಿಸಿದೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ ತಲಾ 2,500 ರೂ. ನಂತೆ ಒಟ್ಟು 17.43 ಕೋಟಿ ರೂ.ಗಳ ಮೊದಲ ಕಂತಿನ ಪರಿಹಾರ ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಬಿಡುಗಡೆ ಮಾಡಿದರು.

ಬಳಿಕ ವೀಡಿಯೋ ಸಂವಾದದ ಮೂಲಕ ಯಾದಗಿರಿಯ ರೈತರೊಂದಿಗೆ ಮಾತನಾಡಿದ ಸಿಎಂ, “ದಸರಾ ಮುಗಿದು ದೀಪಾವಳಿ ಬಂದಿದ್ದರೂ ರೈತರು ಬಿಕ್ಕಟ್ಟಿನಲ್ಲಿದ್ದಾರೆ. ಅವರ ಬದುಕಿಗೆ ಬೆಳಕು ನೀಡಲು ಸರ್ಕಾರ ಬದ್ಧವಾಗಿದೆ. ಈಗ ಮೊದಲ ಹಂತದಲ್ಲಿ 2,500 ರೂ. ನೀಡಲಾಗುತ್ತಿದ್ದು, ಮುಂದಿನ 15-20 ದಿನಗಳಲ್ಲಿ ಎರಡನೇ ಕಂತಿನ ಉಳಿದ 2,500 ರೂ. ಹಣವನ್ನು ಬಿಡುಗಡೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

15 ಜಿಲ್ಲೆಗಳಿಗೆ ಶೀಘ್ರದಲ್ಲೇ ಪರಿಹಾರ ವಿತರಣೆ

ಯಾದಗಿರಿ ಮಾತ್ರವಲ್ಲದೆ ರಾಜ್ಯದ ಇನ್ನುಳಿದ 15 ಜಿಲ್ಲೆಗಳಾದ ಉತ್ತರ ಕನ್ನಡ, ಕೋಲಾರ, ಕೊಪ್ಪಳ, ಚಾಮರಾಜನಗರ, ಧಾರವಾಡ, ಬಳ್ಳಾರಿ, ಬೀದರ್, ಬೆಂಗಳೂರು ನಗರ, ಹಾವೇರಿ, ಬೆಂಗಳೂರು ದಕ್ಷಿಣ, ದಾವಣಗೆರೆ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ ಮತ್ತು ವಿಜಯನಗರ ಜಿಲ್ಲೆಗಳ ಅರ್ಹ ರೈತರಿಗೂ ಪಾವತಿ ಕಡತಗಳ ಸಿದ್ಧತಾ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಮೊದಲ ಕಂತಿನ ಹಣ ತಲುಪಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮಾವಳಿ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಅನ್ವಯವೇ ಯಾವುದೇ ಒತ್ತಡಕ್ಕೆ ಮಣಿಯದೆ ವೈಜ್ಞಾನಿಕವಾಗಿ ಪರಿಶೀಲಿಸಿ ರಾಜ್ಯದ 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರದ ನೆರವು ಕೋರಿ ಸರ್ವಪಕ್ಷ ನಿಯೋಗಕ್ಕೆ ಕರೆ

ಜಂಟಿ ಬೆಳೆ ಹಾನಿ ಮೌಲ್ಯಮಾಪನ ವರದಿಯ ಪ್ರಕಾರ ರಾಜ್ಯದಲ್ಲಿ ಬರಗಾಲದಿಂದಾಗಿ ಬರೋಬ್ಬರಿ 57.93 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಒಟ್ಟು 62 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಈ ಮಹಾ ವಿಪತ್ತಿನಿಂದ ರೈತರನ್ನು ರಕ್ಷಿಸಲು ಕೇಂದ್ರ ಸರ್ಕಾರ ತಕ್ಷಣವೇ ಧಾವಿಸಬೇಕು ಎಂದು ಒತ್ತಾಯಿಸಿದ ಸಿಎಂ, ಎನ್‌ಡಿಆರ್‌ಎಫ್‌ನಿಂದ 22,400 ಕೋಟಿ ರೂ. ಪರಿಹಾರ ಒದಗಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ಕೇಳಲಾಗಿದೆ ಎಂದರು. ಕೇಂದ್ರದ ಮೇಲೆ ಒತ್ತಡ ಹೇರಲು ನಮ್ಮೊಂದಿಗೆ ಬರುವಂತೆ ವಿರೋಧ ಪಕ್ಷಗಳಿಗೂ ಆಹ್ವಾನ ನೀಡಲಾಗಿದ್ದು, ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ರಾಜಸ್ಥಾನ ಬಿಟ್ಟರೆ ದೇಶದಲ್ಲೇ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ಕರ್ನಾಟಕದಲ್ಲಿ ಈ ಬಾರಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ರೈತರಿಗೆ ಉಚಿತ ವಿದ್ಯುತ್ ನೀಡಲು ಈ ಹಿಂದೆ 20 ಸಾವಿರ ಕೋಟಿ ರೂ. ವೆಚ್ಚವಾಗುತ್ತಿತ್ತು, ಆದರೆ ಬರಗಾಲದ ತೀವ್ರತೆಯಿಂದಾಗಿ ಈಗ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ಅದನ್ನು 30 ಸಾವಿರ ಕೋಟಿ ರೂ.ಗೆ ಏರಿಸುವ ಅನಿವಾರ್ಯತೆ ಎದುರಾಗಿದೆ ಎಂದು ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿದರು.

 


Share this with Friends

Related Post