Thu. Nov 5th, 2026

ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ: ಇನ್‌ಮೊಬಿಯೊಂದಿಗೆ ಬಿಎಂಆರ್‌ಸಿಎಲ್ ಒಪ್ಪಂದ

Share this with Friends

ಬೆಂಗಳೂರು: ನಮ್ಮ ಮೆಟ್ರೋದ ಹೊರ ವರ್ತುಲ ರಸ್ತೆ (ORR) ಮೆಟ್ರೋ ಕಾರಿಡಾರ್‌ನ (ನೀಲಿ ಮಾರ್ಗ) ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಲಿರುವ ‘ಇಬ್ಬಲೂರು ಮೆಟ್ರೋ ನಿಲ್ದಾಣ’ದ ನಾಮಕರಣ ಹಕ್ಕುಗಳಿಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಜಾಗತಿಕ ತಂತ್ರಜ್ಞಾನ ಸಂಸ್ಥೆಯಾದ ‘ಇನ್‌ಮೊಬಿ’ (InMobi) ಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ.

ಈ ಒಪ್ಪಂದದ ಅನ್ವಯ ಈ ನಿಲ್ದಾಣವನ್ನು ಇನ್ಮುಂದೆ “ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ” ಎಂದು ಹೆಸರಿಸಲಾಗುತ್ತದೆ. ಈ ಒಪ್ಪಂದದಿಂದಾಗಿ ಬಿಎಂಆರ್‌ಸಿಎಲ್‌ಗೆ ಒಟ್ಟು ₹65 ಕೋಟಿ ಆದಾಯ ಲಭಿಸಲಿದೆ.

ಮೆಟ್ರೋ ಮೂಲಸೌಕರ್ಯಕ್ಕೆ ಕಾರ್ಪೊರೇಟ್ ಬಲ

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಸಿ. ಜಾಫರ್ ಮತ್ತು ಇನ್‌ಮೊಬಿಯ ಜಾಗತಿಕ ಹಿರಿಯ ಉಪಾಧ್ಯಕ್ಷೆ ಡಾ. ಸುಬಿ ಚತುರ್ವೇದಿ ಅವರ ಸಮ್ಮುಖದಲ್ಲಿ ಈ ಒಪ್ಪಂದ ಪ್ರಕ್ರಿಯೆ ನೆರವೇರಿತು. ಇನ್‌ಮೊಬಿ ಸಂಸ್ಥೆಯು ಭಾರತದ ಮೊದಲ ಡಬಲ್ ಯೂನಿಕಾರ್ನ್ ಕಂಪನಿಯಾಗಿದ್ದು, ಮೆಟ್ರೋ ಮೂಲಸೌಕರ್ಯದ ಅಭಿವೃದ್ಧಿಗೆ ಕೈಜೋಡಿಸಿರುವುದು ಹೆಮ್ಮೆಯ ವಿಷಯ ಎಂದು ಡಾ. ಪಿ.ಸಿ. ಜಾಫರ್ ತಿಳಿಸಿದರು. ಈ ಮೊತ್ತವು ಪ್ರಯಾಣಿಕೇತರ ಆದಾಯದ ಉಪಕ್ರಮಗಳಿಗೆ ದೊಡ್ಡ ಬೆಂಬಲ ನೀಡಲಿದ್ದು, ಹೊರ ವರ್ತುಲ ರಸ್ತೆ ವ್ಯಾಪ್ತಿಯ ಐಟಿ ಕಂಪನಿಗಳ ಸಾವಿರಾರು ಉದ್ಯೋಗಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ ಎಂದರು.

ನಗರದ ಜವಾಬ್ದಾರಿಯುತ ಪ್ರಗತಿ

ಇನ್‌ಮೊಬಿ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ತಿವಾರಿ ಮಾತನಾಡಿ, “ಬೆಂಗಳೂರಿನಲ್ಲಿ ಹುಟ್ಟಿ ಜಾಗತಿಕವಾಗಿ ಬೆಳೆದ ನಮ್ಮ ಸಂಸ್ಥೆಗೆ, ಈ ನಗರದ ಮೂಲಸೌಕರ್ಯದ ಭಾಗವಾಗಲು ಹೆಮ್ಮೆಯೆನಿಸುತ್ತದೆ” ಎಂದರು. ಡಾ. ಸುಬಿ ಚತುರ್ವೇದಿ ಅವರು ಮಾತನಾಡಿ, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸುಲಭ ಸಂಪರ್ಕ ಕಲ್ಪಿಸುವ ಇಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಕೈಜೋಡಿಸುವುದು ಭವಿಷ್ಯದ ಬೆಂಗಳೂರಿನ ಸುಸ್ಥಿರ ಬೆಳವಣಿಗೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇತರ ಮೂರು ನಿಲ್ದಾಣಗಳ ಒಪ್ಪಂದ ಪೂರ್ಣ

ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿರುವ ಇನ್ನುಳಿದ ಮೂರು ಪ್ರಮುಖ ನಿಲ್ದಾಣಗಳ ನಾಮಕರಣ ಹಕ್ಕುಗಳಿಗೂ ಬಿಎಂಆರ್‌ಸಿಎಲ್ ಈಗಾಗಲೇ ವಿವಿಧ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ:

ಬೆಳ್ಳಂದೂರು ಮೆಟ್ರೋ ನಿಲ್ದಾಣ: ಪ್ರೆಸ್ಟೀಜ್ ಗ್ರೂಪ್

ಕಡುಬೀಸನಹಳ್ಳಿ ಮೆಟ್ರೋ ನಿಲ್ದಾಣ: ಎಂಬಸಿ ಗ್ರೂಪ್

ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣ: ಬಾಗಮನೆ ಗ್ರೂಪ್

ನೀಲಿ ಮತ್ತು ಕೆಂಪು ಮಾರ್ಗಗಳ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಿರುವ ಇಬ್ಬಲೂರು, ಭವಿಷ್ಯದಲ್ಲಿ ಬೆಂಗಳೂರಿನ ಸಂಚಾರ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮೆಟ್ರೋ ಜಾಲವನ್ನು ಬಲಪಡಿಸಲು ಕಾರ್ಪೊರೇಟ್ ವಲಯದಿಂದ ಇಂತಹ ಮತ್ತಷ್ಟು ಸಹಯೋಗಗಳನ್ನು ಬಿಎಂಆರ್‌ಸಿಎಲ್ ನಿರೀಕ್ಷಿಸುತ್ತಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 


Share this with Friends

Related Post