ಚಿಕ್ಕಮಗಳೂರು: ಕಾಫಿ ಉದ್ಯಮ ಮತ್ತು ಬೆಳೆಗಾರರನ್ನು ರಕ್ಷಣೆ ಮಾಡಲು ಬದ್ದವಾಗಿದ್ದು ಸೆಕ್ಯುರಿಟೈಸೇಶನ್ ಮತ್ತು ಹಣಕಾಸು ಆಸ್ತಿಗಳ ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯಿದೆಯ ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ, ನಿಯೋಗದಿಂದಿಗೆ ದೆಹಲಿಗೆ ಬನ್ನಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಬಾಳೆಹೊನ್ನೂರು ಪಟ್ಟಣದಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ (Central coffee reserch institute -CCRI) ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಕುಮಾರಸ್ವಾಮಿ ಪಾಲ್ಗೊಂಡರು. ಈ ವೇಳೆ 2002ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ (SARFAESI) ಸೆಕ್ಯುರಿಟೈಸೇಶನ್ ಮತ್ತು ಹಣಕಾಸು ಆಸ್ತಿಗಳ ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯಿದೆ ಕಾಫಿ ಬೆಳೆಗಾರರಿಗೆ ಮರಣಶಾಸನವಾಗಿದೆ ಎಂದು ಕಾಫಿ ಬೆಳೆಗಾರರು ಕುಮಾರಸ್ವಾಮಿ ಅವರಿಗೆ ತಿಳಿಸಿದರು.
ಎರಡು ಅಥವಾ ಮೂರು ತಿಂಗಳ ಸಾಲದ ಕಂತು ಪಾವತಿ ಮಾಡದಿದ್ದರೆ ಬ್ಯಾಂಕುಗಳು ಜಾಗತಿಕವಾಗಿ ಸಾಲಗಾರರ ಆಸ್ತಿಗಳನ್ನು ಹರಾಜು ಮಾಡುತ್ತಿರುವ ಅನೇಕ ಉದಾಹರಣೆಗಳು ಇವೆ. ದೇಶ ವಿದೇಶದಲ್ಲಿರುವ ಯಾರೋ ಅನಾಮಿಕರು ಬಂದು ಈ ಕಾಯ್ದೆಯ ನೆರವಿನಿಂದ ನೂರಾರು ವರ್ಷಗಳಿಂದ ದುಡಿಮೆ ಮಾಡುತ್ತಿರುವ ಬೆಳೆಗಾರರ ಭೂಮಿಯನ್ನು ಕಡಿದುಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹಾಗೂ ಶಾಸಕ ರಾಜೇಗೌಡ ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು.
ಈ ಮನವಿ ಸ್ಪಂದಿಸಿದ ಕೇಂದ್ರ ಸಚಿವ ಕುಮಾರಸ್ವಾಮಿರ, ದೆಹಲಿಗೆ ನಿಯೋಗದೊಂದಿಗೆ ಬನ್ನಿ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ನಾನು ಅವಕಾಶ ತೆಗೆದುಕೊಳ್ಳುತ್ತೇನೆ. ನಿಮ್ಮ ಪರವಾಗಿ ಸಚಿವರಿಗೆ ನಾನು ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಕಾಯ್ದೆಯ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಈ ಕಾರ್ಯಕ್ರಮಕ್ಕೆ ಬರುವಾಗ ದಾರಿಯಲ್ಲಿ ನನ್ನ ವಾಹನವನ್ನು ನಿಲ್ಲಿಸಿದ ಯುವಕನೊಬ್ಬ ಇದರ ಬಗ್ಗೆ ತಿಳಿಸಿ, ಇದೊಂದು ಕರಾಳ ಕಾಯ್ದೆ ಆಗಿದ್ದು ಇದರಿಂದ ಕಾಫಿ ಬೆಳೆಗಾರರನ್ನು ಪಾರು ಮಾಡುವಂತೆ ಮನವಿ ಮಾಡಿದ. ಅನಂತರ ಈ ಕಾಯ್ದೆಯ ಬಗ್ಗೆ ಮಾಹಿತಿ ಪಡೆದುಕೊಂಡೆ.ನೀವೆಲ್ಲರೂ ದೆಹಲಿಗೆ ಬನ್ನಿ. ಹಣಕಾಸು ಸಚಿವರ ಜತೆ ಚರ್ಚೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳೋಣ. ಅತಿ ಹೆಚ್ಚು ರಪ್ತು ಆಗುವ ಕಾಫಿಯಿಂದ ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ವಿದೇಶ ವಿನಿಮಯ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಉದ್ಯಮ ಮತ್ತು ಬೆಳೆಗಾರರನ್ನು ನಾವು ರಕ್ಷಣೆ ಮಾಡಬೇಕಿದೆ. ಅದಕ್ಕಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಕಾಫಿ ತ್ಯಾಜ್ಯದಿಂದ ತಯಾರಿಸುವ ರಸಗೊಬ್ಬರವು ಭೂಮಿಗೆ ಉತ್ತಮ ಪೌಷ್ಠಿಕಾಂಶ ನೀಡುತ್ತದೆ. ಹೀಗಾಗಿ ಈ ರಸಗೊಬ್ಬರ ತಯಾರಿಕೆಗೆ ಬೃಹತ್ ಕೈಗಾರಿಕೆಯನ್ನು ಹಾಸನದಲ್ಲಿ ಸ್ಥಾಪನೆ ಮಾಡಬೇಕು ಎಂದು ಬೆಳೆಗಾರರು ನೀಡಿದ ಸಲಹೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.ಇದು ಉತ್ತಮ ಸಲಹೆ. ಹಾಸನಕ್ಕೆ ಹೆದ್ದಾರಿ, ರೈಲ್ವೆ ಸಂಪರ್ಕ ಇದೆ. ವಿಮಾನ ನಿಲ್ದಾಣವೂ ಬರುತ್ತಿದೆ. ಹೀಗಾಗಿ ಕಾಫಿ ರಸಗೊಬ್ಬರ ಕಾರ್ಖಾನೆಗೆ ಹಾಸನ ಸೂಕ್ತ ಜಾಗವಾಗಿದೆ. ಈ ಬಗ್ಗೆ ಸಂಬಂಧಿತ ಕೇಂದ್ರ ಸಚಿವರಾದ ಜೆ.ಪಿ. ನಡ್ದಾ ಅವರಲ್ಲಿಯೂ ಮನವಿ ಮಾಡುತ್ತೇನೆ. ಅವರ ಬಳಿಗೂ ಒಂದು ನಿಯೋಗ ಹೋಗೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಒತ್ತುವರಿ ನೆಪದಲ್ಲಿ ಅರಣ್ಯ ಇಲಾಖೆ ತಮಗೆ ವಿಪರೀತ ಕಿರುಕುಳ ನೀಡುತ್ತಿದೆ ಎಂದು ಇದೇ ವೇಳೆ ಕಾಫಿ ಬೆಳೆಗಾರರು ಮನವಿ ಮಾಡಿದರು.ಎಲ್ಲವನ್ನೂ ಎರಡು ವರ್ಷ ತಾಳ್ಮೆಯಿಂದ ಸಹಿಸಿಕೊಳ್ಳಿ. ನಿಮ್ಮ ಕಷ್ಟಕ್ಕೆ ಪರಿಹಾರ ಕೊಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ ಕೇಂದ್ರ ಸಚಿವರು; ₹2000 ಗ್ಯಾರಂಟಿ ಹಣ ತೆಗೆದುಕೊಂಡು ಏನು ಮಾಡುತ್ತೀರಿ? ಜನರ ಕಷ್ಟಗಳಿಗೆ ಶಾಶ್ವತ ಪರಿಹಾರ ನೀಡದೇ ಕೈಯೊಡ್ಡುವಂತೆ ಮಾಡುವುದು ಗ್ಯಾರಂಟಿ ಬದುಕೇ? ಜನರಿಗೆ ಉಚಿತ ವಿದ್ಯೆ, ಉಚಿತ ಮನೆ, ಉಚಿತ ಆರೋಗ್ಯ ಕೊಡುತ್ತೇನೆ ಎಂದು ಹೇಳಿದೆ. ಜನರು ₹2000 ಹಣಕ್ಕೆ ಮಾರು ಹೋದರು ಎಂದು ಅವರು ಬೇಸರ ವ್ಯಕ್ತಪಡಿಸಿದರು.

