Tue. Jul 21st, 2026

ಆರ್ಟ್ ಆಫ್ ಲಿವಿಂಗ್ ಭೂಮಿ ವಿವಾದಕ್ಕೆ ಎಸ್‌ಐಟಿ ತನಿಖೆ; ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಪರಮೇಶ್ವರ್ ಆದೇಶ!

Share this with Friends

ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಸೇರಿದಂತೆ ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಹಾಗೂ ದಲಿತ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ವಿವಿಧ ದಲಿತಪರ ಸಂಘಟನೆಗಳ ಪ್ರಮುಖ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಅವರು, ಕಂದಾಯ, ಶಿಕ್ಷಣ, ಉದ್ಯೋಗ ಹಾಗೂ ಭೂ ವಿವಾದಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು.

ಸಭೆಯ ಪ್ರಮುಖ ನಿರ್ಧಾರವಾಗಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧೀನದಲ್ಲಿರುವ 270 ಎಕರೆ ಜಮೀನಿನ ಪೈಕಿ ದಲಿತ ಸಮುದಾಯಕ್ಕೆ ಸೇರಿದ 150 ಎಕರೆ ಭೂಮಿಯ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಪರಮೇಶ್ವರ್ ಪ್ರಕಟಿಸಿದರು.

ಕಂದಾಯ ಇಲಾಖೆಯ ಬೆಂಗಳೂರು ವಿಭಾಗೀಯ ಆಯುಕ್ತರಾದ ಆದಿತ್ಯ ಆಮ್ಲನ್ ಬಿಸ್ವಾಸ್ ಅವರ ನೇತೃತ್ವದಲ್ಲಿ ಈ ತನಿಖೆ ನಡೆಯಲಿದ್ದು, ವರದಿಯ ನಂತರವೇ ನೈಜ ಸತ್ಯಾಂಶ ಹೊರಬರಲಿದೆ ಎಂದರು. ಇದರೊಂದಿಗೆ, ರಾಜ್ಯ ಸರ್ಕಾರ ಪ್ರಸ್ತುತ ಕೈಗೆತ್ತಿಕೊಂಡಿರುವ 72 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಕಾನೂನಾತ್ಮಕವಾಗಿ ಸಿಗಬೇಕಾದ ಮೀಸಲಾತಿಯನ್ನು ಕಡ್ಡಾಯವಾಗಿ ನೀಡಲಾಗುವುದು ಹಾಗೂ ಬಾಕಿ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಶೈಕ್ಷಣಿಕ ಸುಧಾರಣೆಗಳ ಕುರಿತು ಮಾತನಾಡಿದ ಡಿಸಿಎಂ, ಪ್ರಸ್ತುತ ಜೀವನ ವೆಚ್ಚಕ್ಕೆ ದಲಿತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ (ವಿದ್ಯಾರ್ಥಿ ವೇತನ) ಸಾಕಾಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಮುಂದಿನ ಬಜೆಟ್‌ನಲ್ಲಿ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ವಿದೇಶಕ್ಕೆ ಉನ್ನತ ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗಳ ಪೂರ್ಣ ಬೋಧನಾ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಹಾಗೂ ಪಿಹೆಚ್‌ಡಿ ಮುಗಿಸಿದ ಆದಿವಾಸಿ ಸಮುದಾಯದ 12 ಮಂದಿಗೆ ವಿಶೇಷ ನೇಮಕಾತಿ ಮೂಲಕ ಉದ್ಯೋಗ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಇದೇ ವೇಳೆ, 9 ಮತ್ತು 10ನೇ ತರಗತಿಯ ಆರ್‌.ಟಿ.ಇ (RTE) ಸೌಲಭ್ಯಕ್ಕೆ ನ್ಯಾಯಾಲಯದಿಂದ ಲಭಿಸಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಶ್ವಾಸನೆ ನೀಡಿದರು.

ಇನ್ನುಳಿದಂತೆ, ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಂದ ದಲಿತ ಸಮುದಾಯದ ಮಹಿಳೆಯರನ್ನು ಕೈಬಿಟ್ಟಿರುವ ದೂರುಗಳ ಬಗ್ಗೆ ಇಲಾಖೆಯಿಂದ ಮಾಹಿತಿ ತರಿಸಿಕೊಂಡು ಶೀಘ್ರದಲ್ಲೇ ಗೊಂದಲ ನಿವಾರಿಸುವುದಾಗಿ ತಿಳಿಸಿದರು. ಅಧಿಕಾರಿಗಳ ಮಟ್ಟದಲ್ಲಿ ವಿಳಂಬವಾಗುತ್ತಿರುವ ಪಿಟಿಸಿಎಲ್ (PTCL) ಕಾಯ್ದೆ ತಿದ್ದುಪಡಿ ಅನುಷ್ಠಾನ ಹಾಗೂ ಎಸ್‌ಸಿಪಿ-ಟಿಎಸ್‌ಪಿ ನಿಧಿಯನ್ನು ಮರಳಿ ಸಮಾಜ ಕಲ್ಯಾಣ ಇಲಾಖೆಯ ಏಕಗವಾಕ್ಷಿ ಪದ್ಧತಿಗೆ ಒಪ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಪರಾಮರ್ಶೆ ನಡೆಸಲಾಗುವುದು ಎಂದರು. ಅರಣ್ಯ ಇಲಾಖೆ ಅಧಿಕಾರಿಗಳಿಂದ ಅಲೆಮಾರಿ ಮತ್ತು ಆದಿವಾಸಿಗಳಿಗೆ ಆಗುತ್ತಿರುವ ತೊಂದರೆಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಳೆದ ವರ್ಷ ಜಾಗತಿಕ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ದೇಶಕ್ಕೆ ಕೀರ್ತಿ ತಂದಿರುವ ಕ್ರೀಡಾಪಟು ನೀಲವ್ವ ನಿಂಗವ್ವ ಹರಿಜನ ಅವರ ವಸತಿ ಸಮಸ್ಯೆಯನ್ನು ಬಗೆಹರಿಸಲು ವಸತಿ ಮಂಡಳಿಯಿಂದ ಶೀಘ್ರದಲ್ಲೇ ನಿವೇಶನ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

 


Share this with Friends

Related Post