Fri. Mar 6th, 2026

ರಾಷ್ಟ್ರಪಿತನ‌ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ: ಸಿ.ಎಂ ಸಿದ್ದರಾಮಯ್ಯ ಕರೆ

Share this with Friends

ಬೆಂಗಳೂರು: ಉದ್ಯೋಗ ಖಾತ್ರಿ ಯೋಜನೆಯಲ್ಲಿದ್ದ ಮಹಾತ್ಮಾ ಗಾಂಧೀಜಿ ಹೆಸರನ್ನು ಕೈಬಿಟ್ಟು ಹೆಸರು ಬದಲಾವಣೆ ಮಾಡುವ ನಿರ್ಧಾರ ಪ್ರಧಾನಿಗಳ ಕಚೇರಿಯಿಂದಲೇ ಆಗಿದ್ದು,ಯೋಜನೆ ಹಾಗು ಹೆಸರನ್ನು ಉಳಿಸಿಕೊಳ್ಳುವ ರಕ್ಷಿಸುವ ಕರ್ತವ್ಯ ನಮ್ಮದು,ಅದಕ್ಕಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ  ವತಿಯಿಂದ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ  ಮಾತನಾಡಿದ ಅವರು,‌ರಾಜಕೀಯದಲ್ಲಿ ಅಧಿಕಾರ ಬರುತ್ತೆ ಹೋಗುತ್ತದೆ, ಆದರೆ ಬಿಜೆಪಿಯವರು ಅಧಿಕಾರ ಹಿಡಿಯಲು ಮತಗಳ್ಳತನ ಸೇರಿದಂತೆ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. MGNAREGA ಹೆಸರು ಬದಲಾವಣೆ ಮಾಡಿದ್ದರೂ  ಮಹಾತ್ಮಾ ಗಾಂಧಿ ಹೆಸರು ಶಾಶ್ವತ. ಕಾರ್ಯಕ್ರಮದ ಹೆಸರು ಬದಲಾವಣೆ ಮಾಡಿದ್ದ ತಕ್ಷಣ ಅವರ ಹೆಸರನ್ನು ಅಳಿಸಲು  ಸಾಧ್ಯವೇ ಎಂದರು.

ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು ರೂಪಿಸಿದ ಕಾರ್ಯಕ್ರಮ 2005 ರಿಂದ ಇಂದಿನವರೆಗೂ ಇತ್ತು. ಈಗ ಬದಲಾಯಿಸಿದ್ದಾರೆ. ಇದು ಸಚಿವ ಸಂಪುಟದಲ್ಲಿ ತೀರ್ಮಾನವಾಗಿಲ್ಲ. ಪ್ರಧಾನಮಂತ್ರಿಗಳ ಕಚೇರಿಯಿಂದಲೇ ತೀರ್ಮಾನವಾಗಿದೆ. ಸಂಬಂಧಪಟ್ಟ ಇಲಾಖೆ ಸಚಿವರಿಗೂ ಇದರ ಬಗ್ಗೆ ತಿಳಿಲಿಲ್ಲ. ಇದನ್ನು ಉಳಿಸಿಕೊಳ್ಳುವ ರಕ್ಷಿಸುವ ಕರ್ತವ್ಯ ನಮ್ಮದು ಎಂದರು.

ಗ್ರಾಮ ಪಂಚಾಯಿತಿಯಿಂದ ರಾಜ್ಯ ಮಟ್ಟದವರೆಗೆ ಜನವರಿ 5 ರಿಂದ ನಿರಂತರವಾಗಿ ಆಂದೋಲನವನ್ನು ಪ್ರಾರಂಭಿಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಿಎಂ ಕರೆ ನೀಡಿದರು.

ರಾಷ್ಟ್ರಪಿತನ ಹೆಸರನ್ನೇ ಅಳಿಸಲು ಹೊರಟಿರುವ ಪ್ರಯತ್ನವನ್ನು ವಿಫಲಗೊಳಿಸಬೇಕು. ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು. MGNAREGA ಕಾರ್ಯಕ್ರಮದಡಿ ದಲಿತರು, ಹಿಂದುಳಿದವರಿಗೆ ಹೆಚ್ಚಾಗಿ ಕೆಲಸ ದೊರಕುತ್ತಿತ್ತು . ಕೇಂದ್ರ ಸರ್ಕಾರ ರಾಜ್ಯಗಳ ಅನುದಾನವನ್ನು ಕೊಡುತ್ತಿತ್ತು. ಈಗ ಹೊಸ ಕಾಯ್ದೆ ಜಾರಿಗೆ ತಂದು, 60% ಕೇಂದ್ರ 40% ರಾಜ್ಯ ಸರ್ಕಾರ ಕೊಡಬೇಕು ಎಂದು ತೀರ್ಮಾನಿಸಿದ್ದಾರೆ. ರಾಜ್ಯಗಳ ಮೇಲೆ ಭಾರಿ ಹೊರೆಯನ್ನೇ ಹೊರೆಸುತ್ತಿದ್ದಾರೆ. ಇದನ್ನು ವಿಫಲಗೊಳಿಸಬೇಕು ಎಂದು ಸಿಎಂ ಕರೆ ನೀಡಿದರು.

ಸ್ವಾತಂತ್ರ್ಯ ಉಳಿಸಿಕೊಳ್ಳೋಣ:

ಸತ್ಯಾಗ್ರಹ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್. ಇದನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ ಎಂದರು.

ಸ್ವಾತಂತ್ರ್ಯ ಹೋರಾಟದ ವಾರಸುದಾರರು ಕಾಂಗ್ರೆಸ್ ಪಕ್ಷದವರು:

ಬ್ರಿಟಿಷ್ ಅಧಿಕಾರಿ ಎ. ಒ ಹ್ಯೂಮ್ ಅವರು  ಕಾಂಗ್ರೆಸ್ ಪಕ್ಷವನ್ನು 1885ರಲ್ಲಿ ಪ್ರಾರಂಭಿಸಿ 148 ವರ್ಷಗಳಾಗಿವೆ. ಬ್ರಿಟಿಷ್ ಆಡಳಿತದ ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾರಂಭವಾದ ಕಾಂಗ್ರೆಸ್ ನಾಗರಿಕರ ಹಕ್ಕುಗಳ ರಕ್ಷಣೆ, ನ್ಯಾಯಯುತ ಆಡಳಿತಕ್ಕಾಗಿ ಒತ್ತಾಯಿಸಿತು. ಮುಂಬೈ ನಲ್ಲಿ ಮಾಡಲಾ ಅಧಿವೇಶನ ಪ್ರಾರಂಭವಾದ ನಂತರ ನಿಧಾನವಾಗಿ ಬೆಳಕನ್ನು ಕಾಣುವಂತಾಯಿತು. 1915 ರಲ್ಲಿ ಮಹಾತ್ಮಾ ಗಾಂಧಿ ಯವರನ್ನು ಗೋಖಲೆಯವರು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಲು ಗಾಂಧಿಯವರನ್ನು ಆಹ್ವಾನಿಸುತ್ತಾರೆ.  ಡಿಸೆಂಬರ್ 28 ಐತಿಹಾಸಿಕ ದಿನವಾಗಿದ್ದು, ಅದನ್ನು ಮರೆಯಲು ಸಾಧ್ಯವಿಲ್ಲ ದೇಶಕ್ಕೆ   ಸ್ವಾತಂತ್ರ್ಯ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಜನಸಂಘ, ಆರ್.ಎಸ್.ಎಸ್, ಹಿಂದೂ ಮಹಾ ಸಭಾ , ಬಿಜೆಪಿ  ಸಂಘಟನೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ವಾರಸುದಾರರು ಕಾಂಗ್ರೆಸ್ ಪಕ್ಷ ಎಂದರು.


Share this with Friends

Related Post