Fri. Mar 6th, 2026

ಕರ್ನಾಟಕ ಮಿನಿ ಬಾಂಗ್ಲಾದೇಶಿಯರ ತಾಣವಾಗುತ್ತಿದೆ: ಅಶೋಕ್

Share this with Friends

ಬೆಂಗಳೂರು: ಹೊಸ ವರ್ಷಕ್ಕೆ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದವರಿಗೆ ಉಡುಗೊರೆ ಕೊಡುತ್ತಾರೆ. ಕನ್ನಡಿಗರಿಗೆ ಚಿಪ್ಪು ಕೊಡುತ್ತಿದ್ದಾರೆ,ಈ ಸರಕಾರ ಬಂದ ಬಳಿಕ ಕರ್ನಾಟಕವು ಮಿನಿ ಬಾಂಗ್ಲಾದೇಶೀಯರ ತಾಣ ಆಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಒತ್ತುವರಿ ಹಿನ್ನೆಲೆಯಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ತೆರವುಗೊಳಿಸಿದ ಯಲಹಂಕದ ಕೋಗಿಲು ಬಡಾವಣೆಗೆ ಇಂದು ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವರು ಯಾರು? ಎಲ್ಲಿಂದ ಬಂದರು ಎಂದು ಕೇಳಿದರು. ಗೂಗಲ್ ಮ್ಯಾಪ್‍ನಡಿ ಇಲ್ಲಿ ಒಂದು ವರ್ಷದ ಹಿಂದೆ ಮನೆಗಳಿರಲಿಲ್ಲ. ಈಗ ಮನೆಗಳಿವೆ. ಇವರೆಲ್ಲ ಬಂದು ಆರು ತಿಂಗಳಾಗಿಲ್ಲ. ಇವರಿಗೆಲ್ಲ ವಿದ್ಯುತ್ ಸಂಪರ್ಕ ಕೊಟ್ಟದ್ದು ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸುಮಾರು 4 ಲಕ್ಷ ಜನರು ಅನಧಿಕೃತ ಮನೆ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿದ್ದಾರೆ. ನಮ್ಮ ರಾಜ್ಯದ ತೆರಿಗೆದಾರರು ವಿದ್ಯುತ್ ಸಂಪರ್ಕವಿಲ್ಲದೇ ಜೀವನ ಸಾಗಿಸುತ್ತಿದ್ದರೆ, ಇಲ್ಲಿ ದುಬಾರಿ ಮೊತ್ತದ ಕೇಬಲ್ ಸಂಪರ್ಕ ಮಾಡಿ ವಿದ್ಯುತ್ ಬಳಸುತ್ತಿದ್ದಾರೆ. ಇವರೇನು ಸಿದ್ದರಾಮಯ್ಯನವರ ನೆಂಟರೇ?ಇವರೆಲ್ಲ ಆಂಧ್ರದ ಪೆನುಗೊಂಡದಿಂದ ಬಂದವರೆಂದು ಹೇಳುತ್ತಾರೆ. 28 ವರ್ಷದವರು ಎನ್ನುತ್ತಾರೆ. 25-26 ವರ್ಷದಿಂದ ವಾಸವಿದ್ದರೆ 2 ವರ್ಷಕ್ಕೆ ಹೇಗೆ ನಡೆದು ಬಂದರು ಎಂದು ಕೇಳಿದರು.

ಇದು ಸುಮಾರು 600 ಕೋಟಿ ಬೆಲೆಯ ಜಮೀನು. ಇದನ್ನು ಸರಕಾರ ಯಾವ ಕಾನೂನಿನಡಿ ಕೊಡಲಿದೆ ಎಂದು ಕೇಳಿದರು. ನೆರೆಯಿಂದ ರಾಜ್ಯದಲ್ಲಿ 13 ಸಾವಿರ ಮನೆಗಳು ಬಿದ್ದಿವೆ. ಆದರೆ, ಕರ್ನಾಟಕದ ರೈತರಾದ ಅವರಿಗೆ ಇನ್ನೂ ಸೂರು ಕೊಟ್ಟಿಲ್ಲ. 2400 ಶಾಲೆಗಳ ಶೀಟ್‍ಗಳು ಹಾರಿ ಹೋಗಿವೆ. ಅವರಿಗೆ ವ್ಯವಸ್ಥೆ ಮಾಡದೇ ಮರದ ಕೆಳಗೆ ಪಾಠ ಮಾಡುವ ಸ್ಥಿತಿ ಇದೆ. ಇವರಿಗೆ ಪಟಾಪಟ್ ಎಂದು ಎರಡೇ ದಿನಗಳಲ್ಲಿ ಬಹುಮಹಡಿ ಮನೆಗಳಲ್ಲಿ ಜಾಗ ಕೊಡುತ್ತಿದ್ದಾರೆ ಎಂದು ಟೀಕಿಸಿದರು.


Share this with Friends

Related Post