ಬೆಂಗಳೂರು:ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಸ್ವಾಗತಾರ್ಹ. ಸದನದಲ್ಲಿ ಇದನ್ನು ಚರ್ಚಿಸೋಣ. ಮನ್‍ರೇಗಾ ಮೂಲಕ ಕಾಂಗ್ರೆಸ್ ಇಷ್ಟು ವರ್ಷಗಳಲ್ಲಿ ಏನು ಮಾಡಿದೆ? ಕಳೆದ 10 ವರ್ಷಗಳಲ್ಲಿ ನಾವು ಮೋದಿ ಅವರ ನಾಯಕತ್ವದಡಿ ಮಾಡಿದ ಸಾಧನೆ ಏನು ಎಂಬುದನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.
“ಗೋಲ್ಡ್ ಫಿಂಚ್ ಹೊಟೇಲ್” ನಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿ ರಾಮ್ ಜಿ ಮೂಲಕ ಮೋದಿ ಅವರು ಒಂದು ಚಾರಿತ್ರಿಕ ನಿರ್ಧಾರ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.ಯೋಜನೆಯನ್ನು ಮರು ಜಾರಿ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷವು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಸುಳ್ಳುಗಳನ್ನು ಹರಡುತ್ತಿದೆ. ಕಾಂಗ್ರೆಸ್ ಪಕ್ಷವು ಯಾವತ್ತು ಮಹಾತ್ಮ ಗಾಂಧೀಜಿ ಅವರನ್ನು ಗೌರವಿಸಿರಲಿಲ್ಲ ಎಂಬುದು ದೇಶಕ್ಕೇ ಗೊತ್ತಿರುವ ಸಂಗತಿ. ಅಲ್ಲದೇ ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನೂ ಗೌರವಿಸುತ್ತಿರಲಿಲ್ಲ ಎಂದು ಟೀಕಿಸಿದರು.
ಕೆಲಸ ಮಾಡುವ ದಿನಗಳನ್ನು 100 ರಿಂದ 125ಕ್ಕೆ ಏರಿಸಿದ್ದಾರೆ. ಕೃಷಿ ಚಟುವಟಿಕೆ ನಡೆಯುವಾಗ ರೈತರಿಗೆ ಅನಾನುಕೂಲ ಆಗಬಾರದೆಂಬ ದೃಷ್ಟಿಯಿಂದ ಆ ಸಂದರ್ಭದಲ್ಲಿ ಜಿ ರಾಮ್ ಜಿ ನಿಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂದಿನಂತೆ ತೀರ್ಮಾನಗಳು ಆಗಲಿವೆ. ಗ್ರಾಮ ಪಂಚಾಯಿತಿ ಅಧಿಕಾರವನ್ನು ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರಕಾರ, ನರೇಂದ್ರ ಮೋದಿ ಅವರು ಮಾಡುತ್ತಿಲ್ಲ.
ಬಿಜೆಪಿ ಮತ್ತು ಜೆಡಿಎಸ್, ಸುಳ್ಳು- ಅಪಪ್ರಚಾರಕ್ಕೆ ಅವಕಾಶ ಕೊಡುವುದಿಲ್ಲ. ಗ್ರಾಮ ಮಟ್ಟಕ್ಕೂ ನಾವು ತೆರಳಿ ಜನರಿಗೆ, ಕಾರ್ಮಿಕರಿಗೆ ಮನವರಿಕೆ ಮಾಡಲಿದ್ದೇವೆ. ಕಾಂಗ್ರೆಸ್ ಪಕ್ಷದ ಷಡ್ಯಂತ್ರವನ್ನು ನಾವು ಬಯಲಿಗೆ ಎಳೆಯುತ್ತೇವೆ ಎಂದು ಪ್ರಕಟಿಸಿದರು.
ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಸ್ವಾಗತಾರ್ಹ. ಸದನದಲ್ಲಿ ಇದನ್ನು ಚರ್ಚಿಸೋಣ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮೋದಿ ಅವರ ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಹತಾಶೆಯ ಸ್ಥಿತಿಯಲ್ಲಿದೆ. ಎನ್‍ಡಿಎ ಸರಕಾರದ ಪ್ರತಿಯೊಂದು ಯೋಜನೆ ಬಗ್ಗೆ ಅದು ಸುಳ್ಳು ಹೇಳುತ್ತಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಜಾರಿಗೊಳಿಸದೇ ಇರಲು ನಿರ್ಧರಿಸಿದರು. ರಾಜ್ಯ ಶಿಕ್ಷಣ ನೀತಿ ಜಾರಿ (ಎಸ್‍ಇಪಿ) ಮಾಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದರು. ಇಲ್ಲಿನವರೆಗೆ ಹೊಸ ನೀತಿ ಜಾರಿ ಆಗಿಲ್ಲ ಎಂದು ಟೀಕಿಸಿದರು. ಯುಪಿಎ ಸರಕಾರದ 2 ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ ಸೇರಿ ವಿವಿಧ ಹಗರಣಗಳ ಕುರಿತು ನಾನು ಪುನರುಚ್ಚಾರ ಮಾಡಲು ಹೋಗುವುದಿಲ್ಲ. ದೇಶದ ಜನರು ಕಾಂಗ್ರೆಸ್ ಪಕ್ಷದ ಆಡಳಿತವನ್ನು ಇನ್ನೂ ಮರೆತಿಲ್ಲ ಎಂದು ತಿಳಿಸಿದರು.

