ಬೆಂಗಳೂರು: ಕ್ರೀಡೆಯಲ್ಲಿ ಸೋಲು-ಗೆಲವು ಸಹಜ. ಒತ್ತಡದ ಕೆಲಸಗಳ ನಡುವೆಯೂ ಕ್ರೀಡೆ, ದೈಹಿಕ ವ್ಯಾಯಾಮಗಳಿಗೆ ಆದ್ಯತೆ ನೀಡುವಂತಾಗಬೇಕು ಎಂದು ವಸತಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ
ಆಟ ಮೈದಾನಗಳ ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ‘ನಮ್ಮ ಲೀಗ್ ಸಂಸ್ಥೆ, ಚಾಮರಾಜಪೇಟೆಯ ಜಿಂಕೆ ಪಾರ್ಕ್ ಮುಂಭಾಗದ ರಾಜೀವ್‌ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ‘ಎಕ್ಸಿಬಿಷನ್‌ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್’ ನಡೆಸಿತು.ಲೀಗ್ ಹಂತದಲ್ಲಿ 3 ತಂಡಗಳು ಸ್ಪರ್ಧಿಸಿದ್ದು, ಚಾಮರಾಜಪೇಟೆ ಚಾರ್ಜರ್ಸ್ ಮತ್ತು ಶಿವಾಜಿನಗರ ಫೈಲ್ವಾನ್ಸ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು,ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಶಿವಾಜಿನಗರ ಫೈಲ್ವಾನ್ಸ್ ತಂಡ ಜಯ ಸಾಧಿಸಿದ್ದು, ವಿಜೇತ ತಂಡಕ್ಕೆ ಸಚಿವ ಜಮೀರ್ ಅಹ್ಮದ್ ಟ್ರೋಫಿ ವಿತರಿಸಿದರು.ಶಿವಾಜಿನಗರ್ ಪೈಲ್ವಾನ್ಸ್ ತಂಡದ ನಾಯಕ ಸಲೀಂ ಟ್ರೋಫಿ ಸ್ವೀಕರಿಸಿದರು.
ಇದೇ ವೇಳೆ ಅಂಧರ ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಪ್ರತಿನಿಧಿಸಿದ್ದ ಕರ್ನಾಟಕದ ಆಟಗಾರ್ತಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ಸಚಿವ ಜಮೀರ್ ಅಹ್ಮದ್ , ಕ್ರೀಡೆಗಳು ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ.ಕ್ರೀಡಾಪಟುಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು. ಕ್ರೀಡೆಯಲ್ಲಿ ಸೋಲು-ಗೆಲವು ಸಹಜ. ಒತ್ತಡದ ಕೆಲಸಗಳ ನಡುವೆಯೂ ಕ್ರೀಡೆ, ದೈಹಿಕ ವ್ಯಾಯಾಮಗಳಿಗೆ ಆದ್ಯತೆ ನೀಡುವಂತಾಗಬೇಕು. ಕ್ರೀಡೆಗಳು ಸಂಘಟನಾ ಶಕ್ತಿ ಮತ್ತು ಒಗ್ಗಟ್ಟಿನ ಗುಣ ಬೆಳೆಸಲಿದೆ ಎಂದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ನಮ್ಮ ಲೀಗ್ ಸಂಸ್ಥೆ ಉತ್ತಮ ಆಶಯ ಇಟ್ಟುಕೊಂಡು ಸ್ಥಳೀಯ ಮಟ್ಟದಲ್ಲಿ ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸುತ್ತಿರುವುದು ಶ್ಲಾಘನೀಯ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದಂತಾಗುತ್ತದೆ ಎಂದರು. ನಟ ದುನಿಯಾ ವಿಜಯ್, ನಮ್ಮ ಲೀಗ್‌ನ ಮತ್ತೊಬ್ಬ ಸಂಸ್ಥಾಪಕ ಯೂಸ್ರಾ ಖಾನ್ ಮತ್ತಿತರರಿದ್ದರು.
ನಮ್ಮಲೀಗ್ ಸಂಸ್ಥಾಪಕ ಫಹಾದ್ ಖಾನ್ ಮಾತನಾಡಿ, ಕ್ರೀಡಾಂಗಣ ಸುಧಾರಣೆ ಅಶಯದೊಂದಿಗೆ ನಮ್ಮ ಲೀಗ್ ಹುಟ್ಟು ಹಾಕಲಾಗಿದೆ. ರಾಜೀವ್ ಗಾಂಧಿ ಕ್ರೀಡಾ ಸಂಕೀರ್ಣವನ್ನು ಉಚಿತವಾಗಿ ಸ್ವಚ್ಛಗೊಳಿಸಿದ್ದೇವೆ. ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಮೊದಲ ಬಾರಿಗೆ ಆಯೋಜಿಸಿದ್ದ ನಮ್ಮ ಲೀಗ್ ಟೂರ್ನಿಮೆಂಟ್, ಎಲ್ಲ ಸಹಕಾರದಿಂದ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಇನ್ನಷ್ಟು ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತೇವೆ ಎಂದರು.

