ಬೀದರ್:ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಹಾಗು ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶತಾಯುಷಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಗೌರವ ಅಧ್ಯಕ್ಷ ಭೀಮಣ್ಣ ಖಂಡ್ರೆ ಲಿಂಗೈಕ್ಯರಾಗಿದ್ದಾರೆ.ಇಂದು ಸಂಜೆ 5 ಗಂಟೆಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಳೆದ 10-12 ದಿನಗಳಿಂದ ವಯೋಸಹಜವಾದ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಭೀಮಣ್ಣ ಖಂಡ್ರೆ ಅವರನ್ನು ಬೀದರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಭಾಲ್ಕಿಯ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಪುತ್ರರಾದ ಈಶ್ವರ ಬಿ ಖಂಡ್ರೆ ಮತ್ತು ಅಮರ ಕುಮಾರ ಖಂಡ್ರೆ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಭೀಮಣ್ಣ ಖಂಡ್ರೆ ನಡೆದುಬಂದ ಹಾದಿ:
1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗಿ ಆಯ್ಕೆ
1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ
4 ಬಾರಿ ಶಾಸಕರಾಗಿ, 2 ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ
ಮುಖ್ಯಮಂತ್ರಿಯಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ.
1999-2011 ರವರೆಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ
ಭೀಮಣ್ಣ ಅವರ ಸಾಧನೆ:
ಹಳ್ಳಿಖೇಡ್‌ನಲ್ಲಿ ಇರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಣಜಿಯಲ್ಲಿರುವ ಮಹಾತ್ಮಾ ಗಾಂಧೀ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು
ನಾರಂಜಾ ಮತ್ತು ಕಾರಂಜಾ ನೀರಾವರಿ ಯೋಜನೆಗಳ ಅನುಷ್ಠಾನದಲ್ಲೂ ಭೀಮಣ್ಣ ಖಂಡ್ರೆ ಅವರು, ಪ್ರಮುಖ ಪಾತ್ರ ವಹಿಸಿದ್ದರು.
ಸ್ವಾತಂತ್ರ್ಯ ಸೇನಾನಿಯಾಗಿ, ಹೈದ್ರಾಬಾದ್ ವಿಮೋಚನೆಯ ಹೋರಾಟಗಾರರಾಗಿ ರಜಾಕಾರರ ದೌರ್ಜನ್ಯ ಪ್ರತಿಭಟಿಸಿದ್ದ ಅವರು, ಏಕೀಕರಣದ ಸಂದರ್ಭದಲ್ಲಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲಿಯೇ ಉಳಿಸಲು ಶ್ರಮಿಸಿದ್ದರು. ಅವರ ತಮ್ಮ ಈ ಕೊಡುಗೆಗಾಗಿ ಸುವರ್ಣ ಏಕೀಕರಣ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದರು.
ಅಂತ್ಯ ಸಂಸ್ಕಾರ:
ನಮ್ಮ ತಂದೆಯವರಾದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (ಬಾಬಾ) ಅವರು ಶುಕ್ರವಾರ ರಾತ್ರಿ 10.47 ಗಂಟೆಗೆ ವಿಧಿವಶರಾಗಿದ್ದಾರೆ ತಂದೆಯವರ ಅಂತ್ಯಕ್ರಿಯೆಯು ಇಂದು ಸಾಯಂಕಾಲ 5:00 ಗಂಟೆಗೆ ಚಿಕಲಚಂದಾ ಬಳಿಯ ಶಾಂತಿಧಾಮ (ಅವರ ತೋಟದಲ್ಲಿ) ನೆರವೇರಿಸಲಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ,ವೀರಶೈವ ಪಂಚಪೀಠಾಧೀಶ್ವರರು, ಗುರು,ವಿರಕ್ತ ಮಠಾಧೀಶರು, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಿಎಂ ಸಂತಾಪ:
ಮಾಜಿ ಸಚಿವರು, ನಾಡಿನ ಹಿರಿಯ ರಾಜಕಾರಣಿಗಳು ಆದ ಭೀಮಣ್ಣ ಖಂಡ್ರೆಯವರ ನಿಧನದಿಂದ ದುಃಖಿತನಾಗಿದ್ದೇನೆ. ಶರಣ ಚಿಂತನೆಗಳ ನೆರಳಂತೆ ಬಾಳಿದ ಧೀಮಂತ ನಾಯಕನ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಮಹಾತ್ಮಗಾಂಧಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಭೀಮಣ್ಣ ಖಂಡ್ರೆಯವರು ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡವರು. ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಂತು, ಆ ಪ್ರಯತ್ನದಲ್ಲಿ ಕೂಡ ಸಫಲರಾದ ಹುಟ್ಟು ಹೋರಾಟಗಾರ. ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಬದುಕು ಕೊಟ್ಟ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕಾಗಿ ದುಡಿದ ಸಾರ್ಥಕ ಜೀವಕ್ಕೆ ಅಂತಿಮ ನಮನಗಳು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರು ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ದುಃಖದಲ್ಲಿ ಕುಟುಂಬದೊಂದಿಗೆ ನಿಂತವರಿಗೆ ಕೃತಜ್ಞತೆ:
ತಂದೆಯವರು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೆ ದಾರಿ ತೋರಿದ ಮಾರ್ಗದರ್ಶಕರಾಗಿದ್ದರು. ಸರಳತೆ, ಮಾನವೀಯತೆ, ಸತ್ಯನಿಷ್ಠೆ ಹಾಗೂ ಸಮಾಜಸೇವೆಯೇ ಅವರ ಬದುಕಿನ ಉಸಿರಾಗಿತ್ತು. ಅವರ ಅಗಲಿಕೆಯ ನೋವು ನಮ್ಮ ಹೃದಯದಲ್ಲಿ ತುಂಬಲಾರದ ಖಾಲಿತನವನ್ನು ಉಂಟುಮಾಡಿದೆ.ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಖಂಡ್ರೆ ತಿಳಿಸಿದ್ದು, ಈ ದುಃಖದ ಸಮಯದಲ್ಲಿ ನಮ್ಮ ಕುಟುಂಬದೊಂದಿಗೆ ನಿಂತು ಸಂತಾಪ ಸೂಚಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು ಎಂದಿದ್ದಾರೆ.

