ಬೆಂಗಳೂರು:ನಮ್ಮ ಸರ್ಕಾರದ ಎಲ್ಲ ಯೋಚನೆ-ಯೋಜನೆಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವುದು ನಮ್ಮ ಸಂವಿಧಾನ. ಅದರೊಳಗಿನ ಅಕ್ಷರ-ಅಕ್ಷರಗಳಿಗೂ ನಾನು, ನಮ್ಮ ಪಕ್ಷ ಮತ್ತು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
77ನೇ ಗಣರಾಜ್ಯೋತ್ಸವದ ಅಂಗವಾಗಿ ನಾಡಿನ ಜನತೆಗೆ ಸಂದೇಶ ನೀಡಿದ ಅವರು, ರಾಜ್ಯದ ಜನತೆಯ ಬಡತನ, ಅನಾರೋಗ್ಯ, ಅನಕ್ಷರತೆ, ಅಪೌಷ್ಠಿಕತೆಯನ್ನು ನಿವಾರಿಸಿ ಹಸಿವು ಮುಕ್ತ, ಅನಾರೋಗ್ಯ ಮುಕ್ತ, ಅನಕ್ಷರತೆ ಮುಕ್ತ ಮತ್ತು ಭಯ ಮುಕ್ತ ಸಮಾಜವನ್ನು ನಿರ್ಮಿಸುವುದು ಚುನಾಯಿತ ಸರ್ಕಾರದ ಸಂವಿಧಾನ ಬದ್ದ ಕರ್ತವ್ಯವಾಗಿದೆ. ಬಡತನ ಎನ್ನುವುದು ಅಪರಾಧ ಅಲ್ಲ. ಇದು ಅಸಮಾನ ಸಂಪತ್ತು ಮತ್ತು ಅವಕಾಶ ಹಂಚಿಕೆಯ ಫಲ ಎನ್ನುವುದನ್ನು ನಾವು ಮರೆಯಬಾರದು. ನಮ್ಮ ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯಾದಾಗ ಮಾತ್ರ ಸಮೃದ್ಧ, ಬಲಿಷ್ಠ ಮತ್ತು ಕ್ರಿಯಾಶಾಲಿಯಾದ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ನಾನು ಬಲವಾಗಿ ನಂಬಿದ್ದೇನೆ ಎಂದರು.
ಜನರ ಪೌಷ್ಠಿಕತೆ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಿ ಆರೋಗ್ಯವನ್ನು ಅಭಿವೃದ್ದಿ ಪಡಿಸುವುದು ಒಂದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂದು ಸಂವಿಧಾನದ ಪರಿಚ್ಛೇದ 47ರಡಿಯ ರಾಜನೀತಿಯ ನಿರ್ದೇಶಿತ ತತ್ವ ಹೇಳಿದೆ. ನಮ್ಮ ಸರ್ಕಾರ ತನ್ನ ಮೂಲಭೂತ ಕರ್ತವ್ಯವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.
ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯಡಿ (Universal Basic Income) ರೂಪಿತವಾದ ನಮ್ಮ ಗ್ಯಾರಂಟಿ ಯೋಜನೆಗಳು ಇಂದು ಅನ್ನಭಾಗ್ಯ ಯೋಜನೆಯ ಮೂಲಕ ಆಹಾರ ಭದ್ರತೆಯನ್ನು, ಗೃಹಜ್ಯೋತಿಯ ಮೂಲಕ ಇಂಧನ ಖಾತರಿಯನ್ನು ನಾಡಿನ ಜನತೆಗೆ ಒದಗಿಸಿವೆ. ಗೃಹಲಕ್ಷ್ಮಿ ಯೋಜನೆಯು ಆರ್ಥಿಕವಾಗಿ ಹಿಂದುಳಿದಿರುವ ಈ ನಾಡಿನ ಕುಟುಂಬಗಳ ಯಜಮಾನಿಯರಿಗೆ ಮಾಸಿಕ 2 ಸಾವಿರ ರೂಪಾಯಿ ಒದಗಿಸುವ ಮೂಲಕ ಅವರ ಕನಿಷ್ಠ ಅಗತ್ಯಗಳಿಗೆ ಬೆಂಗಾವಲಾಗಿದೆ. ಅದೇ ರೀತಿ, ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣದ ಖಾತರಿಯನ್ನು ನೀಡಿ ಅವರನ್ನು ಸ್ವಾವಲಂಬಿಗಳಾಗಿಸಿದೆ. ಯುವನಿಧಿ ಯೋಜನೆಯು ಪದವೀಧರ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಉತ್ತಮ ಉದ್ಯೋಗಾವಕಾಶಗಳಿಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ಅರ್ಪಿಸಿದಾಗಲೂ ಅದನ್ನು ವಿರೋಧಿಸುವವರಿದ್ದರು. ಈಗಲೂ ಆಗಾಗ ಸಂವಿಧಾನವನ್ನು ಬದಲಾಯಿಸುವ, ಕಿತ್ತೊಗೆಯುವ ಕೂಗುಗಳು ಅಲ್ಲಲ್ಲಿ ಕೇಳಿಬರುತ್ತಿದೆ.ಆದರೆ ಇದು ಸುಲಭದ ಕೆಲಸ ಅಲ್ಲ ಎಂದು ಅರ್ಥಮಾಡಿಕೊಂಡವರು ಅದನ್ನು ನಿಧಾನವಾಗಿ ದುರ್ಬಲಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇದು ನಿಧಾನವಾಗಿ ವಿಷ ಉಣಿಸುವ ಸಂಚು. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನವನ್ನು ಅಪ್ರಸ್ತುತ ಮಾಡುವ ಈ ಸಂಚಿನ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ದೇಶ ಸುಭದ್ರವಾಗಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಗಣರಾಜ್ಯೋತ್ಸವದ ದಿನವಾದ ಇಂದು ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಬೇಕಾಗಿದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ಯೋಜನೆಗಳು ನೂರಾರು. ಆದರೆ ಅವುಗಳ ಹಿಂದಿನ ಸದಾಶಯ ಮಾತ್ರ ಒಂದೇ. ಅದು ಸಮಸಮಾಜದ ನಿರ್ಮಾಣ, ಸರ್ವರಿಗೂ ಸಮಪಾಲು ಸಮಬಾಳು. ಸರ್ವರನ್ನು ಸಶಕ್ತರನ್ನಾಗಿಸಿ ಶಕ್ತಿಶಾಲಿ ರಾಜ್ಯ ಕಟ್ಟುವ ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ, ಬೆಂಬಲ, ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

