Fri. Mar 6th, 2026

ಹುಬ್ಬಳ್ಳಿಯ ರೈಲ್ ಸೌಧದಲ್ಲಿ ‘ಕಲಾ ಸಂಗ್ರಹ’ ಉದ್ಘಾಟನೆ..!

Share this with Friends

ಹುಬ್ಬಳ್ಳಿ: ಸಂದರ್ಶಕರಿಗೆ ಭಾರತದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಕ ಮನಮೋಹಕ ದೃಶ್ಯಯಾನವನ್ನು ಒದಗಿಸುವ ಕಲಾ ಸಂಗ್ರಹವನ್ನು ಹುಬ್ಬಳ್ಳಿಯ ರೈಲ್ ಸೌಧದಲ್ಲಿ ಅನಾವರಣಗೊಳಿಸಲಾಗಿದೆ.

ನೈಋತ್ಯ ರೈಲ್ವೆಯು ಇಂದು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ ಸೌಧದ ಮುಖ್ಯ ಪ್ರವೇಶ ದ್ವಾರದಲ್ಲಿ ‘ಕಲಾ ಸಂಗ್ರಹ’ ಎಂಬ ಕಲಾತ್ಮಕ ಸಂಗ್ರಹವನ್ನು ಆರಂಭಿಸಿತು. ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ್ ಇದನ್ನು ಉದ್ಘಾಟಿಸಿದರು.

 ‘ಕಲಾ ಸಂಗ್ರಹ’ದ ಅಡಿಯಲ್ಲಿ ಪ್ರದರ್ಶಿಸಲಾದ ಆಕರ್ಷಕ ಭಿತ್ತಿಚಿತ್ರಗಳು ದೇಶದ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತಿದ್ದು, ರಾಷ್ಟ್ರದ ವೈವಿಧ್ಯತೆ ಮತ್ತು ಕಲಾತ್ಮಕ ಸಂಪ್ರದಾಯಗಳನ್ನು ಉಜ್ಜ್ವಲವಾಗಿ ಪ್ರದರ್ಶಿಸುತ್ತವೆ. ಇವು ಸಂದರ್ಶಕರಿಗೆ ಭಾರತದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಕ ಮನಮೋಹಕ ದೃಶ್ಯಯಾನವನ್ನು ಒದಗಿಸುತ್ತವೆ ಎಂದು ಮುಕುಲ್ ಸರನ್ ತಿಳಿಸಿದರು.

ಹುತಾತ್ಮರ ದಿನ:

ನೈಋತ್ಯ ರೈಲ್ವೆಯು ಇಂದು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ ಸೌಧದಲ್ಲಿ ಹುತಾತ್ಮರ ದಿನವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಿತು. ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಹಾತ್ಮ ಗಾಂಧೀಜಿ ಮತ್ತು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆ ನಡೆಸಿದರು.

ಪ್ರತಿ ವರ್ಷ ಜನವರಿ 30ರಂದು ಭಾರತದಲ್ಲಿ ‘ಹುತಾತ್ಮರ ದಿನ’ ಆಚರಿಸಲಾಗುತ್ತದೆ. ಈ ದಿನವು ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯನ್ನು ಸೂಚಿಸುವುದರ ಜೊತೆಗೆ, ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಅಮೂಲ್ಯ ಪ್ರಾಣವನ್ನು ಅರ್ಪಿಸಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಗೌರವ ಸಲ್ಲಿಸುವ ದಿನವಾಗಿದ್ದು ಈ ದಿನವನ್ನ ರೈಲ್ವೆಯು ಅರ್ಥಪೂರ್ಣವಾಗಿ ಆಚರಿಸಿತು.

ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಹೆಚ್ಚುವರಿ ಮಹಾಪ್ರಬಂಧಕ ಪಿ. ಅನಂತ್, ವಿವಿಧ ವಿಭಾಗಗಳ ಮುಖ್ಯಸ್ಥರು, ಇತರ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Share this with Friends

Related Post