ಶಿವಮೊಗ್ಗ: ದ್ವೇಷ ಭಾಷಣ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು ಇದಕ್ಕೆ ರಾಜ್ಯಪಾಲರು ಅಂಕಿತ ಹಾಕದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕದ ಮೇಲೆ ಚರ್ಚೆಗೂ ಅವಕಾಶ ನೀಡದೇ ಆತುರಾತುರವಾಗಿ ದ್ವೇಷ ಭಾಷಣ ಮಸೂದೆಯನ್ನು ಸರಕಾರ ಮಂಜೂರು ಮಾಡಿಸಿತ್ತು. ಈ ಕಾಯ್ದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆಯಾಗಿದ್ದು ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವ ಒಳ್ಳೆಯ ಬೆಳವಣಿಗೆಯಾಗಿದೆ. ಈ ಮಸೂದೆ ಕಾರಣದಿಂದ ತರೀಕೆರೆಯಲ್ಲಿ ನಮ್ಮ ಹಿಂದೂ ಕಾರ್ಯಕರ್ತ ವಿಕಾಸ್ ಪುತ್ತೂರು ಭಾಷಣವನ್ನೇ ಆರಂಭಿಸಿರಲಿಲ್ಲ; ಅಲ್ಲಿ ಪೊಲೀಸ್ ಅಧಿಕಾರಿಗಳು ಹೋಗಿ ನೋಟಿಸ್ ಕೊಟ್ಟು, ನೀವೇನಾದರೂ ಮಾತನಾಡಿದರೆ, ಬಂಧಿಸುವುದಾಗಿ ಬೆದರಿಸಿದ್ದಾರೆ.ದಕ್ಷಿಣ ಕನ್ನಡದಲ್ಲಿ ಬಜರಂಗದಳದ ಕಾರ್ಯಕರ್ತ ಶರಣ್ ಪಂಪ್ವೆಲ್ ಅವರು ಗಡಿ ದಾಟದಂತೆ ಕಡಿವಾಣ ಹಾಕಿದ್ದಾರೆ. ಬೆಂಗಳೂರಿನಲ್ಲಿ ಪುನೀತ್ ಕೆರೆಹಳ್ಳಿಯವರು ಪ್ರಾಮಾಣಿಕವಾಗಿ ಬಾಂಗ್ಲಾ ದೇಶೀಯರನ್ನು ಪತ್ತೆ ಹಚ್ಚಿ ಪೊಲೀಸರು ಮಾಡುವ ಕೆಲಸ ಮಾಡಿದರೆ, ಅವರನ್ನೂ ಬಂಧಿಸಿದ್ದಾರೆ. ಅಕ್ರಮವಾಗಿ ಗೋಸಾಗಣೆ ಮಾಡುವ ದೇಶದ್ರೋಹಿಗಳನ್ನು ಈಗಿನ ಕಾನೂನಿನಡಿ ಅಕ್ರಮ ವಾಹನ ವಶಕ್ಕೆ ಪಡೆದು ಗೋಸಾಗಾಟಗಾರರನ್ನು ಒಳಗೆ ಹಾಕುತ್ತಿದ್ದರು. ಸಿದ್ದರಾಮಯ್ಯನವರ ಸರಕಾರವು ಬಂಧಿತರಿಗೆ ಸ್ಟೇಷನ್ ಜಾಮೀನು ಕೊಡುವ ಮಸೂದೆ ತರಲು ಮುಂದಾಗಿತ್ತು ಎಂದು ದೂರಿದರು.
ದಕ್ಷಿಣ ಭಾರತದ ನಾಯಕರಾಗಲು ಹೊರಟಿದ್ದಾರೆ ಸಿದ್ದರಾಮಯ್ಯನವರು:
ಹಿಂದೆ ವೀರಶೈವ ಲಿಂಗಾಯತ ಪ್ರತ್ಯೇಕ ಎಂದು ಒಡೆಯಲು ಮುಂದಾಗಿದ್ದರು. ಈಗ ತಮ್ಮ ಲೋಪ ಮುಚ್ಚಿ ಹಾಕಿಕೊಳ್ಳಲು ರಾಜ್ಯವನ್ನು ಕೇಂದ್ರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಕೇಂದ್ರ ಸರಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ; ಕೇಂದ್ರ ಸರಕಾರ ದಕ್ಷಿಣ ಭಾರತದ ರಾಜ್ಯಗಳಿಗೂ ಅನ್ಯಾಯ ಮಾಡಿದೆ ಎಂದು ತಿಳಿಸಿ ದಕ್ಷಿಣ ಭಾರತದ ನಾಯಕರಾಗಲು ಹೊರಟಿದ್ದಾರೆ .ಇಂಥ ವಿಭಜಕ ಮಾನಸಿಕ ಸ್ಥಿತಿ ಸಿದ್ದರಾಮಯ್ಯನವರ ದೃಷ್ಟಿಯಿಂದಲೂ ಒಳ್ಳೆಯದಲ್ಲ; ನಮ್ಮ ರಾಜ್ಯದ ದೃಷ್ಟಿ, ಈ ದೇಶದ ಅಭಿವೃದ್ಧಿ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದರು.
ಇವರ ಸರಕಾರ ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಪ್ರತಿಭಟನೆ ಮಾಡಿ ಬಂದಿತ್ತು. ಹಣಕಾಸಿನ ಸಚಿವರಾದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆ ಗುರಿಯನ್ನು 40 ಸಾವಿರ ಕೋಟಿಗೆ ಏರಿಸಿದ್ದಾರಲ್ಲವೇ? ನಿಮ್ಮ ಕೃಪಾಕಟಾಕ್ಷದಿಂದ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ. ನಾಳೆ ಇವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ರೀತಿ ಅನ್ಯಾಯ ಆಗಿಲ್ಲ. ಸಣ್ಣಪುಟ್ಟ ವ್ಯತ್ಯಾಸ ಇದ್ದರೆ ಪ್ರತಿಭಟನೆ ಮಾಡದೇ, ಕೇಂದ್ರ ಸರಕಾರದ ಮನ ಒಲಿಸಬೇಕಿತ್ತು. ಕರ್ನಾಟಕದಲ್ಲಿ ಬೆಂಗಳೂರು ಮಹಾನಗರ ಗರಿಷ್ಠ ತೆರಿಗೆ ಕೊಡುತ್ತದೆ. ಈ ತೆರಿಗೆ ಹಣವನ್ನು ಬೆಂಗಳೂರಿಗೇ ಬಂಡವಾಳವಾಗಿ ಬಳಸುವುದಾಗಿ ಹೇಳಿದರೆ, ರಾಯಚೂರು, ಕೊಪ್ಪಳ, ಬೆಳಗಾವಿ, ಶಿವಮೊಗ್ಗ ಜಿಲ್ಲೆ ಸ್ಥಿತಿ ಏನಾಗಬೇಕು ಎಂದು ಕೇಳಿದರು.
ಹಣಕಾಸಿನ ಸಚಿವರಾಗಿ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಯನ್ನು ಚಿಂತಿಸಬೇಕಲ್ಲವೇ? ಅದೇರೀತಿ ಈ ದೇಶದ ಪ್ರಧಾನಿ, ಹಣಕಾಸಿನ ಸಚಿವೆಯಾಗಲೀ ಜಾಗತಿಕ ಸವಾಲು ಎದುರಿಸುವ ಸಂದರ್ಭದಲ್ಲಿ ಹಾಗೂ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯುವ ಸಂದರ್ಭದಲ್ಲಿ ಕರ್ನಾಟಕದ ಜೊತೆಗೆ ಮಹಾರಾಷ್ಟ್ರವೂ ಹೆಚ್ಚು ತೆರಿಗೆ ನೀಡುತ್ತದೆ; ಹಾಗೆಂದು ಕರ್ನಾಟಕಕ್ಕೆ ಅನ್ಯಾಯ ಮಾಡಬೇಕೆಂದಲ್ಲ. ಕರ್ನಾಟಕಕ್ಕೂ ನ್ಯಾಯ ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಸರಕಾರ ಹಣಕಾಸಿನ ಕೊರತೆಯಿಂದ ತನ್ನ ಗ್ಯಾರಂಟಿಗಳ ಅನುಷ್ಠಾನವನ್ನೂ ಸರಿಯಾಗಿ ಮಾಡಿಲ್ಲ; ಅಲ್ಲದೇ ಹಣಕಾಸಿನ ಕೊರತೆಯಿಂದ ತನ್ನ ಕೈಯನ್ನು ಕಟ್ಟಿ ಹಾಕಿ ಇಂಥ ಪರಿಸ್ಥಿತಿಗೆ ಬಂದಿದೆ ಎಂದು ಆರೋಪಿಸಿದರು.

