ಬೆಂಗಳೂರು:ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದ ಡಿಸಿಎಂ ಡಿಕೆ ಶಿವಕುಮಾರ್ ಕಾಣೆಯಾಗಿದ್ದಾರೆ. ಕಾಣದಂತೆ ಮಾಯವಾದನು ನಮ್ಮ ಶಿವ ಎನ್ನುವ ಹಾಡಿನಂತೆ ನಾಪತ್ತೆಯಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅವರು, ಬೆಂಗಳೂರನ್ನು 5 ಭಾಗ ಮಾಡಿದ ಬಳಿಕ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಅಧಿಕಾರಿಗಳಿಗೆ ಆಗುತ್ತಿಲ್ಲ. ಇದರಿಂದಾಗಿ ಕಸ ಹಾಗೂ ರಸ್ತೆ ಗುಂಡಿ ಹೆಚ್ಚಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ 15 ದಿನಗಳಲ್ಲಿ ಗುಂಡಿ ಮುಚ್ಚುತ್ತೇವೆ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದರು. ನಮಗೆ ಕೆಂಪೇಗೌಡರ ಅಥವಾ ಎಸ್.ಎಂ.ಕೃಷ್ಣ ಅವರ ಬೆಂಗಳೂರನ್ನು ನೀಡಿದರೆ ಸಾಕಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ. ʼಕಾಣದಂತೆ ಮಾಯವಾದನು ನಮ್ಮ ಶಿವʼ ಎಂಬ ಹಾಡಿನಂತೆ ಅವರು ನಾಪತ್ತೆಯಾಗಿದ್ದಾರೆ. ಅಧಿಕಾರಕ್ಕಾಗಿ ಕಿತ್ತಾಟ ನಿಲ್ಲದೇ ಇದ್ದರೆ ಅಧಿಕಾರಿಗಳು ಕೆಲಸ ಮಾಡಲ್ಲ. ನಾವು ಹಾಲು ಸಕ್ಕರೆಯಂತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಇದು ಹಾಲಾಹಲವಾಗಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಪದೇ ಪದೆ ದೆಹಲಿಗೆ ಹೋಗುತ್ತಿದ್ದಾರೆ. ಪವರ್ ಪಾಲಿಟಿಕ್ಸ್‌ನಿಂದಾಗಿ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎಂದರು.
ಕಾನೂನು ಸುವ್ಯವಸ್ಥೆ:
ನಮ್ಮ ಪೊಲೀಸ್ ವ್ಯವಸ್ಥೆ ಮಾದರಿ ಎಂದು ಗೃಹ ಇಲಾಖೆಯಿಂದ ರಾಜ್ಯಪಾಲರ ಭಾಷಣದಲ್ಲಿ ಬರೆಸಲಾಗಿದೆ. ಇತ್ತೀಚೆಗೆ ಒಬ್ಬ ತ್ರಿಬಲ್ ಸ್ಟಾರ್ ಎಸ್‌ಪಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತದಿಂದ ಬಂಧಿಸಿದ್ದು, ಆತ ಕಿರುಚುತ್ತಿರುವ ವೀಡಿಯೋ ವೈರಲ್ ಆಗಿದೆ. ಇವರ ಮೂಲಕ ಪೊಲೀಸ್ ಪೆರೇಡ್ ಮೈದಾನ ಲಂಚದ ಕೇಂದ್ರವಾಗಿದೆ. ಜಯನಗರದಲ್ಲಿ ಬ್ಯಾಂಕ್ ಹಣ ಲೂಟಿಯಾದಾಗ ಅದರಲ್ಲಿ ಒಬ್ಬ ಪೊಲೀಸ್ ಭಾಗಿಯಾಗಿದ್ದ. ಡ್ರಗ್ಸ್ ಮಾಫಿಯಾ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದರು.
2023ಕ್ಕೆ ಹೋಲಿಸಿದರೆ 2024 ರಲ್ಲಿ, 739 ಅತ್ಯಾಚಾರ ಪ್ರಕರಣ ಕಂಡುಬಂದಿದ್ದು, ಶೇ.23% ಏರಿಕೆಯಾಗಿದೆ. ಫೋಕ್ಸೋ ಕೇಸ್‌ಗಳು 5% ರಷ್ಟು ಹೆಚ್ಚಿದೆ. 100 ರಷ್ಟು ವರದಕ್ಷಿಣೆ ಸಾವಾಗಿದೆ. ಸೈಬರ್ ಅಪರಾಧಗಳಲ್ಲಿ ಕರ್ನಾಟಕ ನಂ.1 ಆಗಿದ್ದು, 5,473 ಕೋಟಿ ರೂ. ವಂಚನೆಯಾಗಿದೆ. 1,131 ಕೊಲೆ ಪ್ರಕರಣ ನಡೆದಿದೆ. ಡ್ರಗ್ ಫ್ಯಾಕ್ಟರಿಗಳು ಪತ್ತೆಯಾಗುತ್ತಿದೆ. 2024 ರಲ್ಲಿ 5,200 ಡ್ರಗ್ಸ್ ಪ್ರಕರಣ ನಡೆದಿದ್ದು, 31.87 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. 2024 ರಲ್ಲಿ 3,961, 2025 ರಲ್ಲಿ 4,177 ಮಂದಿಯನ್ನು ಮಾದಕ ವಸ್ತುಗಳ ಕಳ್ಳಸಾಗಣೆಯಡಿ ಬಂಧಿಸಲಾಗಿದೆ. ಇದರಲ್ಲಿ 300-400 ಪೊಲೀಸರು ಕೂಡ ಇದ್ದಾರೆ. ಇಷ್ಟಾದರೂ ಶಾಂತಿಯ ತೋಟ ಎನ್ನುತ್ತಾರೆ ಎಂದರು.
33 ತಿಂಗಳಲ್ಲಿ 9 ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 15 ಕ್ಕೂ ಅಧಿಕ ಅಧಿಕಾರಿಗಳ ಅಸಹಜ ಸಾವಾಗಿದೆ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್, ಪಿಎಸ್‌ಐ ಪರಶುರಾಮ್ ಮೊದಲಾದವರಿಗೆ ನ್ಯಾಯ ಸಿಕ್ಕಿಲ್ಲ. ಒಬ್ಬ ಗ್ರಂಥಪಾಲಕಿ ವೇತನ ಇಲ್ಲದೆ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಹಿಳಾ ಪೌರಾಯುಕ್ತೆಗೆ ಕೆಟ್ಟ ಮಾತುಗಳಲ್ಲಿ ನಿಂದಿಸಿ ಬೆಂಕಿ ಹಾಕುತ್ತೇನೆಂದು ಬೆದರಿಕೆ ಹಾಕಿದ್ದೇನೆ. ಕೇವಲ ಸಿಗರೇಟ್ ಸೇದುವ ಚಿತ್ರದ ಬ್ಯಾನರ್ ವಿಚಾರಕ್ಕೆ ನಿಂದಿಸಲಾಗಿದೆ. ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್‌ಗೆ ಬೆದರಿಕೆ ಹಾಕಲಾಗಿದೆ ಎಂದರು.
ಕೋಗಿಲು ಕ್ರಾಸ್ ಒತ್ತುವರಿ:
ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿದ್ದಕ್ಕೆ ಕೇರಳ ಸಿಎಂ ಬುಲ್ಡೋಜರ್ ಸರ್ಕಾರವೆಂದು ಟೀಕೆ ಮಾಡಿದಾಗ, ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆದು ನಾಳೆಯೇ ಮನೆ ನೀಡುತ್ತೇನೆ ಎಂದು ಘೋಷಿಸಿದರು. ಪಾಕಿಸ್ತಾನದ ವಕ್ತಾರ ಕರ್ನಾಟಕದಲ್ಲಿ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಇಲ್ಲಿಂದಲೇ ಯಾರೋ ಸಂದೇಶ ನೀಡಿದ್ದಾರೆ. ಕಂಟೋನ್‌ಮೆಂಟ್ ಬಳಿ ಇದ್ದ ಹುಡುಗಿ ಪರೀಕ್ಷೆ ಬರೆದು ವಾಪಸ್ ಬರುವಾಗ ಆಕೆಯ ಮನೆ ತೆರವು ಮಾಡಲಾಗಿತ್ತು. ಈ ಕನ್ನಡಿಗರಿಗೆ ಸರ್ಕಾರ ಸಹಾಯ ಮಾಡಿಲ್ಲ. ಕೇರಳದ ಒಬ್ಬ ಶಾಸಕರು ಇಲ್ಲಿಗೆ ಬಂದು ಸರ್ಕಾರವನ್ನು ಹಿಗ್ಗಾಮುಗ್ಗ ಬೈದು ಹೋಗಿದ್ದಾರೆ. ಬಾಂಗ್ಲಾ ನಿವಾಸಿಗಳ ವಿರುದ್ಧ ಪ್ರಶ್ನೆ ಮಾಡಿದ್ದಕ್ಕೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಆದರೆ ಆ ಶಾಸಕರ ವಿರುದ್ಧ ಕೇಸ್ ದಾಖಲಿಸಿಲ್ಲ. ರಾಜ್ಯದಲ್ಲಿ ಎಲ್ಲ ಕಡೆ ಬಾಂಗ್ಲಾ ವಲಸಿಗರಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿ ಬಂದಿದೆ. 3 ಸಾವಿರ ರೂ. ಕೊಟ್ಟರೆ ಅವರಿಗೆ ಗುರುತಿನ ಚೀಟಿ ದೊರೆಯುತ್ತದೆ. ಚಿಕ್ಕಮಗಳೂರು, ಕೊಡಗು ಮೊದಲಾದ ಭಾಗಗಳಲ್ಲಿ ಇವರೇ ಇದ್ದಾರೆ. ಕೋಗಿಲು ಕ್ರಾಸ್‌ನಲ್ಲಿ ಕೂಡ ಇವರೇ ಇದ್ದಾರೆ. 34 ಜನರು ಇಲ್ಲಿಯವರೇ ಎಂದು ಮೊದಲು ಹೇಳಿದ್ದರೂ, ನಂತರ ಅವರು ಕೂಡ ವಲಸಿಗರೇ ಎಂದು ತಿಳಿದುಬಂದಿದೆ. ಬಾಂಗ್ಲಾ ದೇಶದವರಿಗೆ ಮನೆ ನೀಡಲು ಸರ್ಕಾರಕ್ಕೆ ಯಾಕೆ ಇಷ್ಟು ಆತುರ? ವೋಟಿಗಾಗಿ ಹೀಗೆ ಮಾಡಿದರೆ ಮುಂದೆ ಅನಾಹುತವಾಗಲಿದೆ ಎಂದರು.
ಗೋವಿಂದರಾವ್ ಸಮಿತಿಯ ವರದಿಯಲ್ಲಿ, ಕೋಟ್ಯಂತರ ರೂಪಾಯಿ ಅನುದಾನವಿದ್ದರೂ ಅಭಿವೃದ್ಧಿಯಾಗಿಲ್ಲ ಎನ್ನಲಾಗಿದೆ. ನಂಜುಂಡಪ್ಪ ವರದಿಯಲ್ಲಿ 114 ತಾಲೂಕುಗಳು ಹಿಂದುಳಿದಿವೆ ಎಂದಿತ್ತು. ಸಿದ್ದರಾಮಯ್ಯ 16 ಬಜೆಟ್ ಮಂಡಿಸಿದ ನಂತರವೂ ಈ ತಾಲೂಕುಗಳ ಸಂಖ್ಯೆ 177 ಆಗಿದೆ. ಈವರೆಗೆ ಬಿಜೆಪಿ ಎಂಟೂವರೆ ವರ್ಷ ಆಡಳಿತ ನಡೆದಿದೆ. ದೀರ್ಘವಾಗಿ ಕಾಂಗ್ರೆಸ್ ಆಡಳಿತ ಮಾಡಿದ್ದರೂ ಅಭಿವೃದ್ಧಿಯಾಗಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಮುನ್ನ ತೆರಿಗೆ ಹಾಕಲ್ಲ ಎಂದು ಹೇಳಿ, ನಂತರ 56,000 ಕೋಟಿ ರೂ. ತೆರಿಗೆ ಹಾಕಿದ್ದಾರೆ. 40 ಪರ್ಸೆಂಟ್ ಕಮಿಶನ್‌ನಲ್ಲಿ ಉಳಿಸಿದ ಹಣದಿಂದ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ. ಬಜೆಟ್‌ನಲ್ಲಿ 40% ಎಂದರೆ 1.60 ಲಕ್ಷ ಕೋಟಿ ರೂ. ಆಗುತ್ತದೆ. ಎರಡೂ ಸೇರಿದರೆ 2 ಲಕ್ಷ ಕೋಟಿ ರೂ.ಗೂ ಹೆಚ್ಚಾಗುತ್ತದೆ. ಈ ಹಣ ಎಲ್ಲಿದೆ? ಗುತ್ತಿಗೆದಾರರು 80 ಪರ್ಸೆಂಟ್ ಕಮಿಶನ್ ಬಗ್ಗೆ ಹೇಳಿರುವಾಗ, ಅದು ಸುಳ್ಳಾಗಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ಗುತ್ತಿಗೆದಾರರು ಗುತ್ತಿಗೆ ಪಡೆಯುವಾಗಲೇ 12% ಕಮಿಶನ್ ಹಾಗೂ ಬಿಲ್ ಮಂಜೂರಾತಿಗೆ 7% ನೀಡಬೇಕಾಗುತ್ತದೆ ಎಂದರು.

