ಬೆಂಗಳೂರು: ಇಬ್ಲೂರು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು 800 ಮೀ. ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಬೆಳಿಗ್ಗೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹೊರ ವರ್ತುಲ ರಸ್ತೆ (ORR) – ಸಿಲ್ಕ್ ಬೋರ್ಡ್ ಜಂಕ್ಷನ್ ರಿಂದ ಕೆ.ಆರ್.ಪುರಂವರೆಗೆ ಪರಿಶೀಲನೆ ನಡೆಸಿದರು. ಸಂಚಾರ ದಟ್ಟಣೆ ದೂರುಗಳ ಹಿನ್ನಲೆಯಲ್ಲು ಖುದ್ದು ಭೇಟಿ ನೀಡಿ ಅವಲೋಕನ ನಡೆಸಿದರು. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿದರು.
ಇಬ್ಲೂರು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುಮಾರು 800 ಮೀ. ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಸೂಚನೆ ನೀಡಿದ ಮಹೇಶ್ವರ್ ರಾವ್ ಅಂದಾಜು ವೆಚ್ಚ, ಕಾಮಗಾರಿ ಅವಧಿ ಹಾಗೂ ನಿರ್ಮಾಣ ಮಾದರಿ ಕುರಿತು ಸಮಗ್ರ ವರದಿ ತಯಾರಿಸಲು ನಿರ್ದೇಶನ ನೀಡಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ದಕ್ಷಿಣ ಪಾಲಿಕೆ ಮತ್ತು ಮೆಟ್ರೋ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು,ಮೆಟ್ರೋ ನಿಲ್ದಾಣಗಳ ಬಳಿ ರಸ್ತೆ ಸಮತಟ್ಟಾಗಿಸಲು ಕ್ರಮ ವಹಿಸಬೇಕಯಲು,ಪೈಲ್ ಕ್ಯಾಪ್ ಕಾಮಗಾರಿಯಿಂದ ಉಂಟಾದ ರಸ್ತೆ ಸ್ರಿಂಕ್ ಸಮಸ್ಯೆ ತಕ್ಷಣ ಸರಿಪಡಿಸಬೇಕು ಎಂದು ಸೂಚನೆ ನೀಡಿದರು.
ಪಾದಚಾರಿ ಮಾರ್ಗ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ಇಬ್ಲೂರು ಮೆಟ್ರೋ ನಿಲ್ದಾಣದ ಬಳಿ 2 ಕಿ.ಮೀ ಪಾದಚಾರಿ ಮಾರ್ಗ ಪೂರ್ಣಗೊಳಿಸಬೇಕು, ಅಗತ್ಯವಿರುವ ಸ್ಥಳಗಳಲ್ಲಿ ಸ್ಕೈವಾಕ್ ಪಟ್ಟಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಕೋಡಿಬಿಸನಹಳ್ಳಿ ಬಳಿ ರಾಜಕಾಲುವೆ ಅಗಲೀಕರಣ ಮಾಡಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ನಿರ್ದೇಶನ ನೀಡಿದರು.
ಫೆಬ್ರವರಿ ಅಂತ್ಯದೊಳಗೆ ಡಬಲ್ ಡೆಕ್ಕರ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು,ಹೆಚ್.ಎಸ್.ಆರ್. ಜಂಕ್ಷನ್ ಸರ್ವೀಸ್ ರಸ್ತೆ ಡಾಂಬರೀಕರಣ ಮಾಡಬೇಕು,ಕಾರ್ತಿಕ್ ನಗರ ಮೆಟ್ರೋ ಬಳಿ ಪಾದಚಾರಿ ಮಾರ್ಗ ಸ್ವಚ್ಛತೆ ಮಾಡಬೇಕು ಹಾಗು ಸೇಲಂ ಬ್ರಿಡ್ಜ್ ಬಳಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸೂಚಿಸಿದರು.

