Fri. Mar 6th, 2026

ತಿಮ್ಮಾಪುರ ರಾಜೀನಾಮೆಗೆ ಪಟ್ಟು: ವಿಧಾನಸಭೆಯಲ್ಲಿ ಬಿಜೆಪಿ ಜೆಡಿಎಸ್ ಅಹೋರಾತ್ರಿ ಧರಣಿ

Share this with Friends

ಬೆಂಗಳೂರು: ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶದ ವೇಳೆ ಅಬಕಾರಿ ಹಗರಣ ಪ್ರಕರಣದ ಕಾವು ತಾರಕಕ್ಕೇರಿದ್ದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಸದನದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಸುಮಾರು 6,000 ಕೋಟಿ ರೂ.ಗಳ ಬೃಹತ್ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಈ ಪ್ರತಿಭಟನೆ ನಡೆಸಲಾಗುತ್ತಿದೆ.ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದ ಒಳಗೆ “ಮಲಗುವ ಮೂಲಕ” (Sleep-in protest) ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ಇದರಲ್ಲಿ ಜೆಡಿಎಸ್ ಸದಸ್ಯರೂ ಭಾಗಿಯಾಗಿದ್ದಾರೆ.

ಮದ್ಯದ ಅಂಗಡಿಗಳ ಲೈಸನ್ಸ್ ನೀಡುವಲ್ಲಿ ಲಂಚ ಪಡೆದ ಆರೋಪದ ಕುರಿತು ವಿರೋಧ ಪಕ್ಷಗಳು ಕಳೆದ ಕೆಲವು ದಿನಗಳಿಂದ ಸದನದಲ್ಲಿ ಗದ್ದಲ ನಡೆಸಿದ್ದವು.ಆದರೆ ಕೇವಲ ಆರೋಪಗಳ ಆಧಾರದ ಮೇಲೆ ಸಚಿವರ ರಾಜೀನಾಮೆ ಪಡೆಯುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಈ ಹಿನ್ನೆಲೆಯಲ್ಲಿ ಬಿಜೆಪಿ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಅಹೋರಾತ್ರಿ ಧರಣಿ ಕುರತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,ಸಿದ್ದರಾಮಯ್ಯನವರ ಸರಕಾರ ಭಂಡತನ ಮಾಡುತ್ತಿದೆ. ಭ್ರಷ್ಟ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಮತ್ತೊಮ್ಮೆ ಆಗ್ರಹಿಸಿ ಬಿಜೆಪಿ- ಜೆಡಿಎಸ್ ಇವತ್ತು ಅಹೋರಾತ್ರಿ ಧರಣಿ ನಡೆಸಲಿವೆ ಎಂದು ಪ್ರಕಟಿಸಿದರು.

ಅಬಕಾರಿ ಸಚಿವರ ಮೇಲೆ ನೇರ ಆರೋಪ ಬಂದಿದೆ. ಭ್ರಷ್ಟಾಚಾರದ ಆರೋಪ ಬಂದ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಅವರ ಬೆನ್ನಿಗೆ ನಿಂತಿದ್ದನ್ನು ನೋಡಿದರೆ ಅಬಕಾರಿ ಇಲಾಖೆಯ ಐದಾರು ಸಾವಿರ ಕೋಟಿ ಭ್ರಷ್ಟಾಚಾರದ ಹಗರಣದಲ್ಲಿ ಇಲ್ಲಿಗೆ ಪಾಲು ಹೋಗಿದ್ದಲ್ಲದೇ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಪಾಲು ಹೋಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆರೋಪಿಸಿದರು.


Share this with Friends

Related Post