Tue. Jul 21st, 2026

ದೆಹಲಿ ಪ್ರತಿಭಟನೆ ಹಿಂದೆ ವಿಪಕ್ಷಗಳ ಷಡ್ಯಂತ್ರ: ಬಿ.ವೈ.ವಿಜಯೇಂದ್ರ ಆರೋಪ!

Share this with Friends

ಶಿವಮೊಗ್ಗ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ವಿರೋಧ ಪಕ್ಷಗಳ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯ ನೆಪದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರಲ್ಲದೆ, ಇದೇ ವೇಳೆ ಬಿಜೆಪಿಯ ಬೃಹತ್ ‘ಮಹಾಸಂಪರ್ಕ ಅಭಿಯಾನ’ ಹಾಗೂ ರಾಜ್ಯದ 2ನೇ ವಿಮಾನ ನಿಲ್ದಾಣದ ವಿವಾದದ ಕುರಿತು ಸರ್ಕಾರದ ವಿರುದ್ಧ ಅಸ್ತ್ರಗಳನ್ನು ಪ್ರಯೋಗಿಸಿದರು.

ಪ್ರತಿಭಟನೆ ಹೆಸರಲ್ಲಿ ಅರಾಜಕತೆ: ಸಿದ್ದರಾಮಯ್ಯಗೆ ಹಳೇ ನೆನಪು!

“ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಆದರೆ, ದೆಹಲಿ ಪ್ರತಿಭಟನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಮತ್ತು ದೇಶವಿರೋಧಿ ಘೋಷಣೆಗಳನ್ನು ಕೂಗಲಾಗುತ್ತಿದೆ. ಯುವಕರನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಾಜಕೀಯ ಷಡ್ಯಂತ್ರ ರೂಪಿಸಿವೆ” ಎಂದು ವಿಜಯೇಂದ್ರ ದೂರಿದ್ದಾರೆ. ಪ್ರಧಾನಿ ಮೋದಿಯವರನ್ನು ಟೀಕಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಅವರು, “ಸಿದ್ದರಾಮಯ್ಯನವರು ಸಿಎಂ ಆಗಿದ್ದ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸಿದಾಗ ಇವರ ಕಾಳಜಿ ಎಲ್ಲಿ ಹೋಗಿತ್ತು? ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದ ತನಿಖೆ ಏನಾಯಿತು?” ಎಂದು ಪ್ರಶ್ನಿಸಿದರು. ನೀಟ್ (NEET) ಗೊಂದಲಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗಾಗಲೇ ಮರು ಪರೀಕ್ಷೆ ನಡೆಸಿ ಸರಿಪಡಿಸುತ್ತಿದ್ದರೂ, ಯುವ ಮನಸ್ಸುಗಳಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ಮಾಡಬಾರದು ಎಂದು ಎಚ್ಚರಿಸಿದರು.

ಬಿಜೆಪಿಯಿಂದ ಬೃಹತ್ ‘ಮಹಾಸಂಪರ್ಕ ಅಭಿಯಾನ’: ಒಂದು ಕೋಟಿ ಮನೆ ತಲುಪುವ ಗುರಿ

ಮತದಾರರ ಜಾಗೃತಿ ಹಾಗೂ ಪಕ್ಷದ ಸಂಘಟನೆಗಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಜುಲೈ 25 ಮತ್ತು 26 ರಂದು ರಾಜ್ಯಾದ್ಯಂತ ‘ಮಹಾಸಂಪರ್ಕ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ವಿಜಯೇಂದ್ರ ಪ್ರಕಟಿಸಿದರು. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ ಬಿಜೆಪಿಯ ಎಲ್ಲಾ ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಮನೆಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರಂ ಬಗ್ಗೆ ಜಾಗೃತಿ ಮೂಡಿಸಲಾಗುವುದು ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲಾಗುವುದು. ಪ್ರತಿಯೊಬ್ಬ ಕಾರ್ಯಕರ್ತನಿಗೂ ಕನಿಷ್ಠ 20 ಮನೆಗಳಿಗೆ ಭೇಟಿ ನೀಡುವ ಗುರಿ ನಿಗದಿಪಡಿಸಲಾಗಿದೆ ಎಂದು ವಿವರ ನೀಡಿದರು.

2ನೇ ಏರ್‌ಪೋರ್ಟ್ ಕನಕಪುರದಲ್ಲೇಕೆ? ಡಿಕೆಶಿಗೆ ವಿಜಯೇಂದ್ರ ಪತ್ರದ ಅಸ್ತ್ರ

ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ಹಿತಾಸಕ್ತಿ ಕಾಯುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. “ಡಿ.ಕೆ. ಶಿವಕುಮಾರ್ ಅವರು ಕೇವಲ ಕನಕಪುರಕ್ಕೆ ಮಾತ್ರ ಮುಖ್ಯಮಂತ್ರಿಯಲ್ಲ, ಇಡೀ ರಾಜ್ಯಕ್ಕೆ ನಾಯಕ ಎಂಬುದನ್ನು ಮರೆಯಬಾರದು” ಎಂದು ಕಿಡಿಕಾರಿದ ಅವರು, ಈ ಪ್ರಸ್ತಾವನೆಯನ್ನು ವಿರೋಧಿಸಿ ತಾವು ಈಗಾಗಲೇ ಪತ್ರ ಬರೆದಿರುವುದಾಗಿ ತಿಳಿಸಿದರು. ಎರಡನೇ ವಿಮಾನ ನಿಲ್ದಾಣವನ್ನು ತುಮಕೂರು ಅಥವಾ ಅದರ ಸುತ್ತಮುತ್ತಲಿನ ಭಾಗದಲ್ಲಿ ನಿರ್ಮಿಸಿದರೆ ರಾಜ್ಯದ 7 ರಿಂದ 8 ಜಿಲ್ಲೆಗಳ ಜನರಿಗೆ ಭಾರಿ ಅನುಕೂಲವಾಗಲಿದೆ ಮತ್ತು ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅವರು ಸಲಹೆ ನೀಡಿದರು.

ಗೃಹಲಕ್ಷ್ಮಿ ವಿಳಂಬ ಮತ್ತು ಬರಗಾಲ ನಿರ್ವರಹಣೆ ವೈಫಲ್ಯ

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದರೂ ಮುಖ್ಯಮಂತ್ರಿ ಮತ್ತು ಸಚಿವರು ಬೆಂಗಳೂರಿನಲ್ಲೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ, ಯಾರೂ ಜಿಲ್ಲಾ ಪ್ರವಾಸ ಮಾಡುತ್ತಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು. ಇದೇ ವೇಳೆ, ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಯ ಹೆಸರಿನಲ್ಲಿ ರಾಜ್ಯ ಸರ್ಕಾರವೇ ಗೊಂದಲ ಸೃಷ್ಟಿಸುತ್ತಿದೆ ಎಂದು ದೂರಿದ ಅವರು, ಹೊಸದಾಗಿ ಅರ್ಜಿ ಸಲ್ಲಿಸುವ ನೆಪದಲ್ಲಿ ಕಠಿಣ ಷರತ್ತುಗಳನ್ನು ವಿಧಿಸಿ, ಯೋಜನೆಯನ್ನು ಐದಾರು ತಿಂಗಳು ಮುಂದೂಡಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರ ಯತ್ನಿಸುತ್ತಿದೆ, ಮುಂಬರುವ ಅಧಿವೇಶನದಲ್ಲಿ ಇದರ ವಿರುದ್ಧ ಧ್ವನಿ ಎತ್ತಲಾಗುವುದು ಎಂದರು.

 

 


Share this with Friends

Related Post