ಬೆಂಗಳೂರು:ಸೋಮವಾರ ರಾತ್ರಿ ಪಕ್ಷದ ವೀರಶೈವ ಲಿಂಗಾಯತ ಸಮುದಾಯದ ಶಾಸಕರೊಂದಿಗೆ ಸಭೆ ನಡೆಸಿದ್ದು ನಿಜ, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಅದು ಕೇವಲ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೀಮಿತವಾದ ಚರ್ಚೆ ನಡೆದ ಸಭೆಯೇ ಹೊರತು ರಾಜಕೀಯ ಚಟುವಟಿಕೆಯ ಸಭೆಯಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ಪಷ್ಟೀಕರಣ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆದಿರುವುದು ನಿಜ. ಇದರಲ್ಲಿ ಪಕ್ಷದಲ್ಲಿನ ನಾಯಕತ್ವದ ವಿಚಾರವಾಗಲಿ, ವೈಯಕ್ತಿಕ ಅಜೆಂಡಾಗಳಾಗಲಿ ಇರಲಿಲ್ಲ. ಎಲ್ಲಾ ಸಮುದಾಯಗಳ ಶಾಸಕರೂ ಹೀಗೆ ಆಗಿಂದಾಗ್ಗೆ ಸಭೆ ಸೇರುವುದು ಸರ್ವೇಸಾಮಾನ್ಯ, ಅದೇ ರೀತಿ ನಮ್ಮ ಸಮುದಾಯ ಶಾಸಕರು ಸಭೆ ಸೇರಿದ್ದೆವು ಎಂದು ಶಾಸಕರ ಸಭೆಯನ್ನು ಸಮರ್ಥಿಸಿಕೊಂಡರು.
ಸಮುದಾಯದ ಹಿತಾಸಕ್ತಿಗಳ ರಕ್ಷಣೆಗಾಗಿ ಹಾಗು ನಮ್ಮ ಸಮುದಾಯಕ್ಕೆ ಸರಕಾರದ ನಾನಾ ಹಂತಗಳಲ್ಲಿ ಸಿಗಬೇಕಾದ ನ್ಯಾಯಬದ್ಧ ಪ್ರಾತಿನಿಧ್ಯ ಮುಂತಾದ ವಿಚಾರ ಕುರಿತು ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು. ನಮ್ಮ ಸಮುದಾಯವು ಹೊಂದಿರುವ ಶಾಸಕರ ಸಂಖ್ಯೆಯು ನಮ್ಮ ಸಮುದಾಯ ಎಷ್ಟು ದೊಡ್ದದು ಎನ್ನುವುದನ್ನು ತೋರಿಸುತ್ತದೆ. ಜನಪ್ರತಿನಿಧಿಗಳಾದ ಮೇಲೆ ಸಮುದಾಯದ ಹಿತವನ್ನೂ ನೋಡಬೇಕಾಗುತ್ತದೆ ಎಂದರು.
ಲಿಂಗಾಯತ ಸಮುದಾಯವು ರಾಜ್ಯದ ಅತ್ಯಂತ ದೊಡ್ಡ ಸಮುದಾಯವಾಗಿದೆ. ಹೋದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 57 ಜನರಿಗೆ ಟಿಕೆಟ್ ಕೊಟ್ಟಿತ್ತು. ಇದರಲ್ಲಿ 34 ಜನ ಗೆದ್ದಿದ್ದಾರೆ. ಮೊನ್ನೆಯ ಸಭೆಗೆ ಇವರಲ್ಲಿ 28 ಜನ ಬಂದಿದ್ದರು. ಸಚಿವರ ಪೈಕಿ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಶರಣಬಸಪ್ಪ ದರ್ಶನಾಪುರ ಮಾತ್ರ ಅನಿವಾರ್ಯ ಕಾರಣಗಳಿಂದ ಬಂದಿರಲಿಲ್ಲ. ಉಳಿದ ಎಲ್ಲ ಲಿಂಗಾಯತ ಸಚಿವರೂ ಬಂದಿದ್ದರು ಎಂದರು.

