ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಧಾನಿಯ ರಾಜಕೀಯ ಅಖಾಡ ರಂಗೇರಿದೆ. ಬೆಂಗಳೂರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣತೊಟ್ಟಿರುವ ಬಿಜೆಪಿ, ಇಂದು ರಾಜ್ಯ ಚುನಾವಣಾ ಉಸ್ತುವಾರಿ ರಾಮ್ ಮಾಧವ್ ಅವರ ನೇತೃತ್ವದಲ್ಲಿ ಮಹತ್ವದ ಸಿದ್ಧತಾ ಸಭೆ ನಡೆಸಿತು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆಯುತ್ತಿರುವ ಜಿಬಿಎ ಚುನಾವಣಾ ಸಿದ್ದತಾ ವಿಶೇಷ ಸಭೆಯ ಆರಂಭದಲ್ಲೇ ರಾಜ್ಯ ಸರ್ಕಾರದ ಶಿಫಾರಸ್ಸಿನಂತೆ ರಾಜ್ಯ ಚುನಾವಣಾ ಆಯೋಗವು ಈ ಬಾರಿ ಇವಿಎಂ ಬದಲಿಗೆ ಬ್ಯಾಲಟ್ ಪೇಪರ್ ಬಳಸಲು ನಿರ್ಧರಿಸಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ತಾಂತ್ರಿಕ ಯುಗದಲ್ಲಿ ಬ್ಯಾಲಟ್ ಪೇಪರ್ ಬಳಸುವುದು ಪ್ರಜಾಪ್ರಭುತ್ವದ ಹಿನ್ನಡೆ” ಎಂದು ಅಭಿಪ್ರಾಯಪಟ್ಟಿರುವ ನಾಯಕರು, ಈ ಕುರಿತು ನ್ಯಾಯಾಲಯದ ಮೊರೆ ಹೋಗುವ ಅಥವಾ ಚುನಾವಣಾ ಆಯೋಗಕ್ಕೆ ಗಡುವು ನೀಡಿ ನಿರ್ಧಾರ ಮರುಪರಿಶೀಲಿಸುವ ಕುರಿತು ಸಮಾಲೋಚನೆ ನಡೆಸಿದರು.
ಬಿಜೆಪಿ-ಜೆಡಿಎಸ್ ‘ಡಬಲ್ ಎಂಜಿನ್’ ತಂತ್ರಗಾರಿಕೆ:
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ.ಬೆಂಗಳೂರಿನ 369 ವಾರ್ಡ್‌ಗಳಲ್ಲೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಪ್ರಮುಖ ನಾಯಕರನ್ನು ವೀಕ್ಷಕರನ್ನಾಗಿ ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮೀಸಲಾತಿ ಮತ್ತು ಅಭಿವೃದ್ಧಿಯೇ ಅಸ್ತ್ರ:
ರಾಜ್ಯ ಸರ್ಕಾರದ “ವಾರ್ಡ್ ಮೀಸಲಾತಿ” ಪಟ್ಟಿಯು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿರುವ ರಾಮ್ ಮಾಧವ್, ಇದನ್ನು ಮನೆಮನೆಗೆ ತಲುಪಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು. ಬೆಂಗಳೂರಿನ ಹಾಳಾದ ರಸ್ತೆಗಳು, ಕಸದ ಸಮಸ್ಯೆ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಜೂನ್ 30ರ ಗಡುವು:
ಸುಪ್ರೀಂ ಕೋರ್ಟ್ ಆದೇಶದಂತೆ ಜೂನ್ 30ರೊಳಗೆ ಜಿಬಿಎ ಚುನಾವಣೆ ಪ್ರಕ್ರಿಯೆ ಮುಗಿಯಬೇಕಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಮತದಾನ ನಡೆಯುವ ಸಾಧ್ಯತೆಯಿದ್ದು, ಮುಂದಿನ 60 ದಿನಗಳ ಕಾಲ ನಿರಂತರ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೀಲಿನಕ್ಷೆ ಸಿದ್ಧಪಡಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಸಹ-ಉಸ್ತುವಾರಿಗಳಾದ ಸತೀಶ್ ಪೂನಿಯಾ, ಸಂಜಯ್ ಉಪಾಧ್ಯಾಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರಿನ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಮಾಜಿ ಸಚಿವರು, ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

