ಬೆಂಗಳೂರು:ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಕೇವಲ 20%ರಷ್ಟು ಮಾತ್ರ ಅನುದಾನ ನೀಡುತ್ತದೆ. ಉಳಿದ 80%ರಷ್ಟು ಅನುದಾನವನ್ನು ರಾಜ್ಯ ಸರಕಾರವೇ ಭರಿಸುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಅವರೇ ಹೇಳಿದ್ದಾರೆ. ಹೀಗಿದ್ದ ಮೇಲೆ ದರ ಏರಿಕೆ ಮಾಡಿದ್ದು ಯಾರು? ಕೇಂದ್ರ ಸರ್ಕಾರವ ಅಥವಾ ರಾಜ್ಯ ಸರ್ಕಾರವ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು;ಕರ್ನಾಟಕದಲ್ಲಿ ಮಾತ್ರ ಮೆಟ್ರೋ ಪ್ರಯಾಣ ದರ ಪದೇಪದೇ ದೊಡ್ಡ ಮೊತ್ತದಲ್ಲಿ ಏರಿಕೆಯಾಗುತ್ತಿದೆ. ಅದೇ ರೀತಿ ಬೇರೆ ರಾಜ್ಯಗಳ ಮೆಟ್ರೋ ದರ ಯಾಕೆ ಏರಿಕೆ ಆಗುತ್ತಿಲ್ಲ? ಅಲ್ಲಿನ ಸರ್ಕಾರಗಳು ಹೇಗೆ ನಡೆಸುತ್ತಿವೆ ಎಂಬುದನ್ನು ಇವರು ಹೇಳಬೇಕಲ್ಲವೇ? ಬೇರೆಯದಕ್ಕೆಲ್ಲ ನಮ್ಮ ಪಾಲು ಜಾಸ್ತಿ ಎನ್ನುವವರು ಪ್ರಯಾಣ ದರದ ವಿಷಯದಲ್ಲಿ ಯಾಕೆ ಉಲ್ಟಾ ಹೊಡೆಯುತ್ತಿದ್ದಾರೆ ಎಂದರು.
ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನತೆಗೆ ಸುಳ್ಳು ಹೇಳುತ್ತಿದೆ.ಮೆಟ್ರೋ ಯೋಜನೆಯಲ್ಲಿ ತನ್ನ ಪಾಲು ಜಾಸ್ತಿ ಇದೆ. ಹಾಗಿದ್ದ ಮೇಲೆ ಬೆಲೆ ಏರಿಕೆ ಮಾಡುವುದು ಯಾರು? ರಾಜ್ಯ ಸರ್ಕಾರ ಜನರಿಗೆ ಮಂಕುಬೂದಿ ಎರಚುತ್ತಿದೆ ಎಂದರು.
ಕಳೆದ ಎರಡೂವರೆ ವರ್ಷದಿಂದ ಇವರು ಮಾಡುತ್ತಿರುವ ತಪ್ಪು ನಿರ್ಣಯಗಳಿಂದ ಜನ ರೋಸಿ ಹೋಗಿದ್ದಾರೆ. ಅದನ್ನು ಕೇಂದ್ರದ ತಲೆಗೆ ಕಟ್ಟುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಜನರು ಎಚ್ಚೆತ್ತುಕೊಳ್ಳಬೇಕು ಎಂದು ನಾನು ಹೇಳಲು ಇಚ್ಚಿಸುತ್ತೇನೆ ಎಂದರು.
ಈಗ ಐದು ಗ್ಯಾರೆಂಟಿ ಕೊಡ್ತಾ ಇದ್ದಾರೆ ಅಲ್ಲವೇ? ಅವುಗಳಿಂದ ನಾವು ಜನರನ್ನು ಬದುಕಿಸುತ್ತಿದ್ದೇವೆ. ಜನರಿಗೆ ಖರ್ಚು ಮಾಡುವ ಶಕ್ತಿ.ಕೊಟ್ಟಿದ್ದೇವೆ, ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚಳವಾಗಿದೆ ಎಂದೆಲ್ಲಾ ಹೇಳುತ್ತಿದ್ದಾರೆ. ಅದಕ್ಕೆ ಇರಬೇಕು, ಜನರಲ್ಲಿ ದುಡ್ಡಿದೆ ಎಂದು ಮನಸೋ ಇಚ್ಛೆ ತೆರಿಗೆ ಹಾಕುವುದು, ದರ ಏರಿಕೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಟೀಕಾಪ್ರಹಾರ ನಡೆಸಿದರು.
ಗ್ಯಾರಂಟಿಗಳಿಂದ ಜನರ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಸಂತೋಷವಾಗಿದ್ದಾರೆ. ಏನೇ ದರ ಏರಿಕೆ ಮಾಡಿದರೂ ಜನರು ಸಂತೋಷವಾಗಿ ಕೊಡುತ್ತಾರೆ ಎನ್ನುವ ಭಾವನೆ ಸರ್ಕಾರಕ್ಕೆ ಬಂದ ಹಾಗಿದೆ. ಮುಖ್ಯಮಂತ್ರಿಗಳು ಆ ಭ್ರಮೆಯಲ್ಲಿ ಇದ್ದಾರೆ. ಹೀಗಾಗಿ ಜನವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

