Fri. Mar 6th, 2026

ಬ್ಯಾಲೆಟ್ ಪೇಪರ್ ಬಳಕೆ ಸರ್ಕಾರದ ‘ಹಿಮ್ಮುಖ’ ನಡೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ

Share this with Friends

ಗದಗ: ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ (EVM) ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ಮುಂದಾಗಿರುವುದನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ. “ಐಟಿ-ಬಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪ್ರಗತಿಪರ ಕರ್ನಾಟಕವನ್ನು ಸರ್ಕಾರ ಮತ್ತೆ ಪ್ರಾಚೀನ ಕಾಲಕ್ಕೆ ಕೊಂಡೊಯ್ಯುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಚುನಾವಣಾ ಆಯೋಗವು ಇವಿಎಂ ಹ್ಯಾಕ್ ಮಾಡುವುದನ್ನು ಸಾಬೀತುಪಡಿಸಿ ಎಂದು ಕರೆ ನೀಡಿದಾಗ ಭಾಗವಹಿಸದ ಕಾಂಗ್ರೆಸ್, ಈಗ ಇವಿಎಂ ಬಗ್ಗೆ ಅಪಸ್ವರ ಎತ್ತುತ್ತಿರುವುದು ಹಾಸ್ಯಾಸ್ಪದ. ಯಾವ ಇವಿಎಂ ಮೂಲಕ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದಿದ್ದಾರೋ, ಈಗ ಅದನ್ನೇ ತಿರಸ್ಕರಿಸುತ್ತಿದ್ದಾರೆ. ಸರ್ಕಾರಕ್ಕೆ ಅಷ್ಟು ನಂಬಿಕೆ ಇಲ್ಲದಿದ್ದರೆ, ಮೊದಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಜಾಗತಿಕ ಮಟ್ಟದಲ್ಲಿ ಭಾರತದ ಇವಿಎಂಗೆ ಮನ್ನಣೆ

“ಭಾರತದ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಇವಿಎಂ ತಂತ್ರಜ್ಞಾನವನ್ನು ಆಫ್ರಿಕಾ ಹಾಗೂ ಯುರೋಪ್ ರಾಷ್ಟ್ರಗಳು ಮೆಚ್ಚಿಕೊಂಡಿವೆ. ಅಲ್ಲಿನ ಚುನಾವಣಾ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಅಧಿಕಾರಿಗಳು ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬ್ಯಾಲೆಟ್ ಪೇಪರ್ ಮೊರೆ ಹೋಗುತ್ತಿರುವುದು ಜನವಿರೋಧಿ ನೀತಿಯಾಗಿದೆ” ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ನಿರಂತರ ಒಲೈಕೆ ರಾಜಕಾರಣ ಮಾಡುತ್ತ ಬಂದಿದ್ದು. ಹಿಂದುಳಿದವರು, ಬಡವರು, ರೈತರ ಸಾಲ ಮನ್ನಾ ಎಲ್ಲರಿಗೂ ಮಾಡಬೇಕಿತ್ತು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆತ್ಮಹತ್ಯೆಗೆ ಸರಿಯಾಗಿ ಪರಿಹಾರ ಕೊಡುತ್ತಿಲ್ಲ.  ಇನ್ಶುರೆನ್ಸ್ ಕೊಡುತ್ತಿಲ್ಲ. ಬಡ್ಡಿ ಮನ್ನಾ ಕೂಡ ಮಾಡುತ್ತಿಲ್ಲ. ಶೇ 80% ರಷ್ಟು ಜನರು ಸಂಕಷ್ಟದಲ್ಕಿದ್ರಾರೆ. ಜನ ವಿರೋಧಿ ನೀತಿಯನ್ನು ಈ ಸರ್ಕಾರ ಮಾಡುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

ನಾಯಕತ್ವದ ಗೊಂದಲದ ನಾಟಕ: ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಅವರ ಮಗ ಯತೀಂದ್ರ ಅವರೇ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ಈ ‘ನಾಯಕತ್ವದ ನಾಟಕ’ ನಿಲ್ಲಿಸಿ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದರು.

ಮೆಟ್ರೋ ದರ ಏರಿಕೆ: ಮೆಟ್ರೋ ದರ ಏರಿಕೆಗೂ ಕೇಂದ್ರಕ್ಕೂ ಸಂಬಂಧವಿಲ್ಲ. ರಾಜ್ಯ ಸರ್ಕಾರದ ಅಧೀನದ ಕಂಪನಿ ಕೈಗೊಂಡಿರುವ ಈ ಜನವಿರೋಧಿ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು

ಲಕ್ಕುಂಡಿ ಪ್ರವಾಸೋದ್ಯಮ: ಲಕ್ಕುಂಡಿಯನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸುವ ಪ್ರಯತ್ನ ಸ್ವಾಗತಾರ್ಹ. ಇದರಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗದಗ ಜಿಲ್ಲೆಗೆ ಕೇಂದ್ರಿಯ ವಿದ್ಯಾಲಯ: ಗದಗನಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದೇನೆ. ರಾಜ್ಯ ಸರ್ಕಾರ ಜಾಗದ ಸಮಸ್ಯೆ ಬಗೆಹರಿಸಿ ಕಳುಹಿಸಿದರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶಾಲೆ ಆರಂಭವಾಗಲಿದೆ ಎಂದರು.


Share this with Friends

Related Post