Fri. Mar 6th, 2026

“ಡಿಸಿಎಂ ವರ್ಸಸ್ ವಿಜಯೇಂದ್ರ: ಬೆಂಗಳೂರಿನ ‘ಕಸ’ ಈಗ ರಾಜಕೀಯ ರಣರಂಗ!”

Share this with Friends

ಬೆಂಗಳೂರು: “ಕಸ ವಿಲೇವಾರಿ ತಡೆದರೆ ವಿರೋಧ ಪಕ್ಷದ ನಾಯಕರ ಮನೆ ಮುಂದೆ ಕಸ ಸುರಿಯುತ್ತೇವೆ ಎನ್ನುವುದು ಉಪಮುಖ್ಯಮಂತ್ರಿಗಳ ದರ್ಪದ ಪರಮಾವಧಿ. ಇಂತಹ ಗೊಡ್ಡು ಬೆದರಿಕೆಗಳಿಗೆ ಬಿಜೆಪಿ ಮಣಿಯುವ ಪ್ರಶ್ನೆಯೇ ಇಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುಡುಗಿದ್ದಾರೆ.

ಬೆಂಗಳೂರಿನ ಕಸ ವಿಲೇವಾರಿ ವಿಚಾರವಾಗಿ ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.

“ಬೆಂಗಳೂರನ್ನು ಸಿಂಗಾಪುರ, ದುಬೈ ಮಾಡುತ್ತೇವೆ ಎಂದು ಹಗಲುಗನಸು ಕಾಣುತ್ತಿರುವ ಸರ್ಕಾರಕ್ಕೆ ಮೊದಲು ರಸ್ತೆ ಗುಂಡಿಗಳನ್ನು ಮುಚ್ಚುವ ಯೋಗ್ಯತೆ ಇಲ್ಲ. ಟನೆಲ್ ರಸ್ತೆಗಳ ಬಗ್ಗೆ ಮಾತನಾಡುವ ಮೊದಲು ನಗರದ ಜ್ವಲಂತ ಸಮಸ್ಯೆಗಳಾದ ಕಸ ವಿಲೇವಾರಿ ಮತ್ತು ಮೂಲಸೌಕರ್ಯಗಳತ್ತ ಗಮನ ಹರಿಸಲಿ” ಎಂದು ವಿಜಯೇಂದ್ರ ಲೇವಡಿ ಮಾಡಿದರು.

“ಬೆಂಗಳೂರು ಉಸ್ತುವಾರಿ ಸಚಿವರಾಗಿ ನಗರದ ಸಮಸ್ಯೆ ಸರಿಪಡಿಸುವುದು ನಿಮ್ಮ ಜವಾಬ್ದಾರಿ. ಅದನ್ನು ಬಿಟ್ಟು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯರಿಗೆ ಬೆದರಿಕೆ ಹಾಕುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಇಂತಹ ಬೆದರಿಕೆಗಳಿಗೆ ಅಂಜುವುದಿಲ್ಲ. ಮೊದಲು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿ” ಎಂದು ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

ಎಸ್ಮಾದಡಿ ಬಂಧನಕ್ಕೆ ಒಳಗಾಗಲೂ ಸಿದ್ಧ- ಸವಾಲು

ಉಪ ಮುಖ್ಯಮಂತ್ರಿಗಳು ಕಸದ ವಿಚಾರ ಮಾತನಾಡುವಾಗ ಬ್ಲ್ಯಾಕ್‍ಮೇಲ್ ಪದ ಬಳಸಿದ್ದಾರೆ. ಇದರ ಮೂಲಕ ಚುನಾಯಿತ ಪ್ರತಿನಿಧಿ, ದೊಡ್ಡಬಳ್ಳಾಪುರ ಕ್ಷೇತ್ರದ ಜನತೆಗೆ ಅವಮಾನ ಮಾಡಬಾರದು ಎಂದು ದೊಡ್ಡಬಳ್ಳಾಪುರದ ಶಾಸಕ ಧೀರಜ್ ಮುನಿರಾಜು ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ನನಗೆ ನಿಮ್ಮ ಅನುದಾನದ, ಕಸದ ಅವಶ್ಯಕತೆ ಇಲ್ಲ ,ಬೇರೆ ಕ್ಷೇತ್ರಕ್ಕೆ ಬೇರೆ ಒಎಂ ಪ್ರಕಾರ ಎಸ್ಮಾ ಕಾಯ್ದೆ ಹಾಕಿ ನನ್ನನ್ನು ಬಂಧಿಸುವುದಾದರೆ ತಾಲ್ಲೂಕಿನ ಜನತೆಗಾಗಿ, ನೀರು- ವಾಯು ಮಾಲಿನ್ಯವನ್ನು ತಪ್ಪಿಸಲು, ಅವೈಜ್ಞಾನಿಕ ಭೂಮಿಗೆ ಕಸ ಸುರಿಯುವ (ಲ್ಯಾಂಡ್ ಫಿಲ್) ಪದ್ಧತಿಯನ್ನು ತಪ್ಪಿಸಲು- ಬೆಂಗಳೂರಿನ ಕಸ ತೆಗೆದುಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಏನು ಪಾಪ ಮಾಡಿದ್ದಾರೆ ಎಂದು ಕೇಳಿದರು.

ದೊಡ್ಡಬಳ್ಳಾಪುರ ಕ್ಷೇತ್ರದ ಜನರು ಏನು ಪಾಪ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇಲ್ಲಿಗೆ ವೈದ್ಯಕೀಯ ತ್ಯಾಜ್ಯ ಕಳಿಸುತ್ತಿದ್ದಾರೆ. ಬಲ್ಕರ್ ವೇಸ್ಟ್ ಕಮರ್ಷಿಯಲ್ ತ್ಯಾಜ್ಯಕ್ಕೆ ಕಳಿಸುವಂತಿಲ್ಲ; 20 ಬಲ್ಕರ್ ವಾಹನ ಕಳಿಸುತ್ತಿದ್ದಾರೆ. 70 ವಾಹನ ಕಳಿಸಲು ಬಿಟ್ಟರೂ ಮಿಕ್ಕಿದ್ದು ಬಿಡದೇ ಇದ್ದರೆ ನಮ್ಮ ಮೇಲೆ ಎಸ್ಮಾ ಕಾಯ್ದೆ ಹಾಕುವುದಾದರೆ ಖಂಡಿತವಾಗಿ ಹಾಕಿ. ಖಂಡಿತವಾಗಿ ಬಂಧಿಸಿ ಎಂದು ಸವಾಲು ಹಾಕಿದರು. 6 ತಿಂಗಳು ಜೈಲಿಗೆ ಕಳಿಸುತ್ತೀರಾ? ಖಂಡಿತವಾಗಿ ಕಳುಹಿಸಿ ಎಂದು ತಿಳಿಸಿದರು.

ಜನತೆಯ ಪರವಾಗಿ ಹೋರಾಟ ನಿಲ್ಲಿಸುವುದಿಲ್ಲ..

ತಾಲ್ಲೂಕಿನ ಜನತೆಯ ಪರವಾಗಿ ನನ್ನ ಹೋರಾಟವನ್ನು ನಾನು ನಿಲ್ಲಿಸುವುದಿಲ್ಲ. ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಕಸದ ವಾಹನ, ಒಎಂ ಕಾಪಿಯಲ್ಲಿ ಏನಿದೆಯೋ ಅದನ್ನು ಬಿಟ್ಟು ಉಳಿದ ಹೆಚ್ಚುವರಿ ವಾಹನಗಳನ್ನು ನಾನು ನಿಲ್ಲಿಸುತ್ತೇನೆ ಎಂದು ತಿಳಿಸಿದರು.

ಇನ್ನೂ ಹೆಚ್ಚಿನ ಹೋರಾಟ ರೂಪಿಸುತ್ತೇವೆ..

ತಾಲ್ಲೂಕಿನ ಜನತೆ ಪರವಾಗಿ, ತಾಲ್ಲೂಕಿನ ಆರೋಗ್ಯದ ಹಿತದೃಷ್ಟಿಯಿಂದ ತಾವು ಮಾಡುತ್ತಿರುವ ಜಲ- ವಾಯು ಮಾಲಿನ್ಯದ ವಿರುದ್ಧ, ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಹೋರಾಟ ಖಂಡಿತವಾಗಿ ಈಗ ಶುರುವಾಗಿದೆ. ಇನ್ನು ಮುಂದಕ್ಕೆ ಇನ್ನೂ ಹೆಚ್ಚಿನ ಹೋರಾಟವನ್ನು ರೈತರು, ಸ್ಥಳೀಯರು ಹಾಗೂ ಜನಪ್ರತಿನಿಧಿಗಳಿಂದ ರೂಪಿಸುತ್ತೇವೆ ಎಂದು ಹೇಳಿದರು.

 


Share this with Friends

Related Post