ಮಂತ್ರಾಲಯ: ಕನ್ನಡ ಚಿತ್ರರಂಗದ ಹೆಮ್ಮೆ, ನ್ಯಾಷನಲ್ ಸ್ಟಾರ್ ರಿಷಬ್ ಶೆಟ್ಟಿ ಅವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿದ್ದ ಅವರು, ಮಠದಲ್ಲಿ ನಡೆಯುತ್ತಿರುವ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ತಮ್ಮ ಮುಂದಿನ ಬಿಗ್ ಬಜೆಟ್ ಸಿನಿಮಾ ‘ಜೈ ಹನುಮಾನ್’ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ ರಿಷಬ್, ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಮಂತ್ರಾಕ್ಷತೆ ಪಡೆದರು.
ರಶ್ಮಿಕಾ ಮಂದಣ್ಣ ಮದುವೆ ವಿಚಾರ:
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ರಿಷಬ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿಯೇ ಉಳಿದಿದ್ದಾರೆ.ರಿಷಬ್ ಶೆಟ್ಟಿ ತಂಡದ ಮೂಲಗಳಿಂದ “ಅವರ ವೈಯಕ್ತಿಕ ವಿಚಾರಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ” ಎಂಬ ಪರೋಕ್ಷ ಉತ್ತರ ಲಭಿಸಿದೆ. ಈ ಹಿಂದೆ ಪ್ರಮೋದ್ ಶೆಟ್ಟಿ ಅವರು ಹೇಳಿದಂತೆ, ಮದುವೆಗೆ ಆಮಂತ್ರಣ ಬರುವ ಬಗ್ಗೆ ತಮಗೆ ಯಾವುದೇ ನಿರೀಕ್ಷೆಯೂ ಇಲ್ಲ ಎಂಬ ನಿಲುವಿಗೆ ರಿಷಬ್ ಶೆಟ್ಟಿ ಕೂಡ ಬದ್ಧರಾಗಿರುವಂತೆ ತೋರುತ್ತಿದೆ.
ರಾಯರ ಸಿನಿಮಾ ಬಗ್ಗೆ ಸುಳಿವು:
ಭವಿಷ್ಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಸಾರುವ ಚಿತ್ರ ಮಾಡುವ ಆಸೆ ತಮಗಿದೆ ಎಂಬ ಸುಳಿವನ್ನು ರಿಷಬ್ ನೀಡಿದ್ದು, ಇದು ರಾಯರ ಭಕ್ತರಲ್ಲಿ ಭಾರಿ ಕುತೂಹಲ ಮೂಡಿಸಿದೆ.

