Fri. Mar 6th, 2026

ರಾಮನಗರಕ್ಕೇ ನಿಖಿಲ್ ಫಿಕ್ಸ್: ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ ಪುತ್ರ!

Share this with Friends

ತುಮಕೂರು:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಯ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಈಗ ತೆರೆ ಬಿದ್ದಿದೆ. ತಾವು ಬೇರೆ ಯಾವುದೇ ಕ್ಷೇತ್ರಕ್ಕೆ ವಲಸೆ ಹೋಗುವುದಿಲ್ಲ, ಬದಲಾಗಿ ರಾಮನಗರ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತ ಎಂದು ಅವರು ಘೋಷಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಚಾಮರಾಜನಗರ ಅಥವಾ ಮೈಸೂರು ಭಾಗದ ಯಾವುದಾದರೂ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದ್ದವು. ಈ ಬಗ್ಗೆ ತುಮಕೂರಿನಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, “ನಾನು ರಾಮನಗರ ಕ್ಷೇತ್ರಕ್ಕೆ ಫಿಕ್ಸ್ ಆಗಿದ್ದೇನೆ. ಸೋಲು-ಗೆಲುವಿನ ಲೆಕ್ಕಾಚಾರಕ್ಕಿಂತ ಕ್ಷೇತ್ರಕ್ಕೆ ನಿಷ್ಠವಾಗಿರುವುದು ಮುಖ್ಯ” ಎಂದು ತಿಳಿಸುವ ಮೂಲಕ ಗೊಂದಲಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.

ಕುಟುಂಬದ ರಾಜಕೀಯ ಭದ್ರಕೋಟೆ:

ರಾಮನಗರವು ಹೆಚ್.ಡಿ. ದೇವೇಗೌಡರು ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ನೆಲ. ಈ ಭಾವನಾತ್ಮಕ ಸಂಬಂಧವನ್ನು ಸ್ಮರಿಸಿದ ನಿಖಿಲ್, “ನಮ್ಮ ಕುಟುಂಬಕ್ಕೆ ಶಕ್ತಿ ನೀಡಿದ ಜನರನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರ ಒತ್ತಾಸೆಯೂ ಇದೇ ಆಗಿದೆ” ಎಂದರು. ಕಳೆದ ಚುನಾವಣೆಯ ಸೋಲಿನಿಂದ ಪಾಠ ಕಲಿತಿದ್ದು, ಈ ಬಾರಿ ಪಕ್ಷ ಸಂಘಟನೆಯ ಮೂಲಕ ಜನರ ವಿಶ್ವಾಸ ಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕರ್ತರೇ ಹೈಕಮಾಂಡ್: ಪಕ್ಷದ ಹಿರಿಯ ನಾಯಕರ ತೀರ್ಮಾನಕ್ಕಿಂತ ಹೆಚ್ಚಾಗಿ, ರಾಮನಗರದ ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರ ಆದೇಶವೇ ತಮಗೆ ಅಂತಿಮ ಎಂದು ಹೇಳಿದ್ದಾರೆ. ಪಕ್ಷವು ಕೇವಲ ನಾಯಕರ ಮೇಲೆ ನಿಂತಿಲ್ಲ, ಕಾರ್ಯಕರ್ತರ ಶಕ್ತಿಯಿಂದ 25 ವರ್ಷಗಳ ಬೆಳ್ಳಿ ಹಬ್ಬ ಆಚರಿಸಿದೆ ಎಂದು ತಿಳಿಸಿದ್ದಾರೆ

ಮೈತ್ರಿ ಬಲದ ವಿಶ್ವಾಸ:

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಮುಂದಿನ ಚುನಾವಣೆಯಲ್ಲಿ ಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.


Share this with Friends

Related Post