ಬೆಂಗಳೂರು: ಚುನಾವಣೆಗೂ ಮುನ್ನ ‘ಎಲ್ಲರಿಗೂ ಫ್ರೀ’ ಎಂದು ಭರವಸೆ ನೀಡಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ, ಈಗ ಗ್ಯಾರಂಟಿ ಯೋಜನೆಗಳನ್ನು ಕೈಬಿಡುವಂತೆ ಜನರಲ್ಲಿ ಮನವಿ ಮಾಡುತ್ತಿರುವುದು ಸಾರ್ವಜನಿಕರಿಗೆ ಮಾಡುತ್ತಿರುವ ಅತಿದೊಡ್ಡ ದ್ರೋಹ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಸಚಿವ ಎಂ.ಬಿ. ಪಾಟೀಲರು “ಶ್ರೀಮಂತರು ಗ್ಯಾರಂಟಿ ಬಿಟ್ಟುಕೊಡಿ” ಎಂದು ನೀಡಿದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.”ಗ್ಯಾರಂಟಿ ಯೋಜನೆಗಳು ಅವೈಜ್ಞಾನಿಕ ಎಂದು ನಾವು ಮೊದಲೇ ಎಚ್ಚರಿಸಿದ್ದೆವು. ಈಗ ಸಚಿವರೇ ಅದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಒಂದು ಕೈಯಲ್ಲಿ ಉಚಿತ ಎಂದು ನೀಡಿ, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ.
ಭ್ರಷ್ಟಾಚಾರದ ಆರೋಪ:
ಸರ್ಕಾರದ ಆಡಳಿತ ಯಂತ್ರವೇ ಭ್ರಷ್ಟಾಚಾರದ ಸುಳಿಯಲ್ಲಿ ಮುಳುಗಿರುವಾಗ ಜನಸಾಮಾನ್ಯರಿಗೆ ‘ತ್ಯಾಗ’ ಮಾಡುವಂತೆ ಉಪದೇಶ ನೀಡುವುದು ಉದ್ಧಟತನದ ಪರಮಾವಧಿ. ಇದು ಜನರಿಗೆ ನೀಡಿದ ಭರವಸೆಯಲ್ಲ, ಬದಲಿಗೆ ಕಾಂಗ್ರೆಸ್ ನಾಯಕರ ಖಜಾನೆ ತುಂಬಿಸಿಕೊಳ್ಳುವ ಗ್ಯಾರಂಟಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಅಭಿವೃದ್ಧಿ ಶೂನ್ಯವಾಗಿರುವ ಈ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ. ಮೊದಲು ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಿ, ಆಮೇಲೆ ಉಪದೇಶ ನೀಡಲಿ ಎಂದು ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

