Fri. Mar 6th, 2026

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಅದ್ಧೂರಿ ಆರತಕ್ಷತೆ: ನವದಂಪತಿಗೆ ಡಿ.ಕೆ. ಶಿವಕುಮಾರ್ ಶುಭ ಹಾರೈಕೆ

Share this with Friends

ಹೈದರಾಬಾದ್: ಬಹುಕಾಲದ ಕುತೂಹಲಕ್ಕೆ ತೆರೆ ಎಳೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹದ ಆರತಕ್ಷತೆ ಕಾರ್ಯಕ್ರಮ ಬುಧವಾರ ಸಂಜೆ ಇಲ್ಲಿನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಈ ಹೈ-ಪ್ರೊಫೈಲ್ ಸಮಾರಂಭದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಂಡು ನೂತನ ದಂಪತಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಇತ್ತೀಚೆಗಷ್ಟೇ ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಇಂದು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರಿಗಾಗಿ ವಿಶೇಷ ಔತಣಕೂಟ ಹಮ್ಮಿಕೊಂಡಿತ್ತು.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ತೆಲುಗು ಮತ್ತು ಕನ್ನಡ ಚಿತ್ರರಂಗದ ಸ್ಟಾರ್ ಕಲಾವಿದರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಕೊಡವ ಹಾಗೂ ತೆಲುಗು ಸಂಪ್ರದಾಯಗಳ ಸಮ್ಮಿಲನದಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ವೈರಲ್ ಆಗುತ್ತಿದೆ.

ತಾರೆಯರ ಸಮಾಗಮ:

ದಕ್ಷಿಣ ಭಾರತದ ಚಿತ್ರರಂಗದ ದಿಗ್ಗಜರಾದ ಮೆಗಾಸ್ಟಾರ್ ಚಿರಂಜೀವಿ, ನಟ ನಾಗಾರ್ಜುನ, ವೆಂಕಟೇಶ್, ಅಲ್ಲು ಅರ್ಜುನ್, ರಾಮ್ ಚರಣ್ ಮತ್ತು ಉಪಾಸನಾ ದಂಪತಿಗಳು, ನಟ ನಾನಿ ಹಾಗೂ ಪವನ್ ಕಲ್ಯಾಣ್ ಅವರು ಪಾಲ್ಗೊಂಡು ಕಳೆ ಹೆಚ್ಚಿಸಿದರು. ಬಾಲಿವುಡ್‌ನಿಂದ ಕರಣ್ ಜೋಹರ್, ಶಾಹಿದ್ ಕಪೂರ್ ಮತ್ತು ಕೃತಿ ಸನನ್ ಅತಿಥಿಗಳಾಗಿ ಆಗಮಿಸಿದ್ದರು.

ಸಮಾರಂಭದ ಪ್ರಮುಖ ವಿಶೇಷತೆಗಳು:

ವೇದಿಕೆ ಪ್ರವೇಶ: ನವದಂಪತಿಗಳು ಪರಸ್ಪರ ಕೈಹಿಡಿದು ವೇದಿಕೆಗೆ ಆಗಮಿಸಿದ್ದು ನೋಡುಗರ ಗಮನ ಸೆಳೆಯಿತು. ಈ ವೇಳೆ ಅವರು ಫೋಟೋಗ್ರಾಫರ್‌ಗಳಿಗೆ ನಮಸ್ಕರಿಸಿ ಆಶೀರ್ವಾದ ಬೇಡಿದರು.

ರಶ್ಮಿಕಾ ಅಲಂಕಾರ: ರಶ್ಮಿಕಾ ಅವರು ಕಪ್ಪು ಮತ್ತು ಚಿನ್ನದ ಬಣ್ಣದ ಬಾರ್ಡರ್ ಇರುವ ಕೆಂಪು ರೇಷ್ಮೆ ಸೀರೆಯುಟ್ಟು, ಭರ್ಜರಿ ಟೆಂಪಲ್ ಜ್ಯುವೆಲ್ಲರಿ ಧರಿಸಿ ದೇವತೆಯಂತೆ ಕಂಗೊಳಿಸುತ್ತಿದ್ದರು.

ವಿಶಿಷ್ಟ ಭದ್ರತೆ: ಭದ್ರತಾ ದೃಷ್ಟಿಯಿಂದ ಈ ಸಮಾರಂಭಕ್ಕೆ ಆಹ್ವಾನಿತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಪ್ರವೇಶಕ್ಕಾಗಿ ಪ್ರತಿಯೊಬ್ಬ ಅತಿಥಿಗೂ QR ಕೋಡ್ ಆಧರಿತ ಡಿಜಿಟಲ್ ಆಮಂತ್ರಣ ಪತ್ರವನ್ನು ನೀಡಲಾಗಿತ್ತು.

ಸಂಪ್ರದಾಯದ ಸಮ್ಮಿಲನ: ಹೈದರಾಬಾದ್‌ನ ತಾಜ್ ಕೃಷ್ಣಾದಲ್ಲಿ ನಡೆದ ಈ ಔತಣಕೂಟದಲ್ಲಿ ತೆಲುಗು ಮತ್ತು ಕೊಡವ ಸಂಪ್ರದಾಯದ ವಿಶೇಷ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಯಿತು.

 


Share this with Friends

Related Post