ಬೆಂಗಳೂರು: ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಮನೆ ಬಾಗಿಲಿಗೇ ತ್ವರಿತ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ವಿತರಿಸುವ ‘ಆರೋಗ್ಯ ಸಂಚಾರಿ’ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ನಗರದ ಆರೋಗ್ಯ ಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಯುನೈಟೆಡ್ ವೇ ಆಫ್ ಬೆಂಗಳೂರು’ (UWBe) ಹಾಗೂ ‘ಹೆಲ್ತಿಯಮ್ ಮೆಡ್‌ಟೆಕ್’ ಸಂಸ್ಥೆಗಳ ಸಿಎಸ್‌ಆರ್ (CSR) ಸಹಯೋಗದೊಂದಿಗೆ ಹಸಿರು ನಿಶಾನೆ ತೋರುವ ಮೂಲಕ ಅವರು ಈ ಇ-ಬೈಕ್‌ಗಳನ್ನು ವಿತರಿಸಿದರು.
ಜನರ ಮನೆಬಾಗಿಲಿಗೆ ಆರೋಗ್ಯ ಸೇವೆ:
ಬಳಿಕ ಮಾತನಾಡಿದ ಸಚಿವರು, “ಆರೋಗ್ಯ ಸೇವೆ ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗಬಾರದು. ಹಳ್ಳಿಗಳ ಮತ್ತು ನಗರದ ಹೊರವಲಯದ ಜನರ ಮನೆಬಾಗಿಲಿಗೆ ಚಿಕಿತ್ಸೆ ತಲುಪಿಸುವುದು ನಮ್ಮ ಗುರಿ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸುರಕ್ಷಾಧಿಕಾರಿಗಳು ಕುಗ್ರಾಮಗಳಿಗೆ ತೆರಳಲು ಎದುರಿಸುತ್ತಿದ್ದ ಸಾರಿಗೆ ಸಮಸ್ಯೆಯನ್ನು ಈ ಎಲೆಕ್ಟ್ರಿಕ್ ಬೈಕ್‌ಗಳು ನೀಗಿಸಲಿವೆ. ಇದರಿಂದ ಸಕಾಲದಲ್ಲಿ ಚಿಕಿತ್ಸೆ ಮತ್ತು ಸಲಹೆ ನೀಡಲು ಸಾಧ್ಯವಾಗುತ್ತದೆ,” ಎಂದರು.
ಮೊದಲ ಹಂತದಲ್ಲಿ 69 ಬೈಕ್ ವಿತರಣೆ:
ಮೊದಲ ಹಂತದ ಯೋಜನೆಯಡಿ ತುಮಕೂರು, ರಾಮನಗರ (ಬೆಂಗಳೂರು ದಕ್ಷಿಣ) ಹಾಗೂ ಬೆಂಗಳೂರು ನಗರ ಜಿಲ್ಲೆಯ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಟ್ಟು 69 ಇ-ಬೈಕ್‌ಗಳನ್ನು ನೀಡಲಾಗಿದೆ. ಬೈಕ್‌ನೊಂದಿಗೆ ಹೆಲ್ಮೆಟ್, ರೈನ್‌ಕೋಟ್ ಮತ್ತು ನೀರಿನ ಬಾಟಲಿಗಳನ್ನು ಒಳಗೊಂಡ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ಹಂತಹಂತವಾಗಿ ಈ ಯೋಜನೆಯನ್ನು ವಿಸ್ತರಿಸಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿವೆ ಎಂದು ಸಚಿವರು ಮಾಹಿತಿ ನೀಡಿದರು.
ವ್ಯವಸ್ಥಿತವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಸಹಭಾಗಿತ್ವದ ಸಂಸ್ಥೆಗಳ ಕಾರ್ಯವೈಖರಿಯನ್ನು ಸಚಿವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

