Thu. Mar 19th, 2026

 ‘ನಂದಿನಿ’ ಸಿಹಿಗೂ ತಟ್ಟಿದ ಗ್ಯಾಸ್ ಕಹಿ: ಉತ್ಪಾದನೆ ನಿಲ್ಲಿಸುವ ಭೀತಿಯಲ್ಲಿ ಕೆಎಂಎಫ್

Share this with Friends

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವವು ಈಗ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವಹಿವಾಟಿನ ಮೇಲೆ ನೇರ ಪರಿಣಾಮ ಬೀರಿದೆ. ಗ್ಯಾಸ್ ಪೂರೈಕೆ ಸಮರ್ಪಕವಾಗಿಲ್ಲದ ಕಾರಣ, ಜನಪ್ರಿಯ ‘ನಂದಿನಿ’ ಸಿಹಿತಿಂಡಿಗಳ ಉತ್ಪಾದನೆಯು ಇನ್ನು ಎರಡು ದಿನಗಳಲ್ಲಿ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಈ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ (MD) ಎಂ.ಕೆ. ಜಗದೀಶ್ ಅವರು, “ನಮ್ಮ ಉತ್ಪಾದನಾ ಘಟಕಗಳಲ್ಲಿ ಕೇವಲ ಎರಡು ದಿನಗಳಿಗೆ ಆಗುವಷ್ಟು ಮಾತ್ರ ಗ್ಯಾಸ್ ದಾಸ್ತಾನು ಇದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ದಿಢೀರ್ ವ್ಯತ್ಯಯ ಉಂಟಾಗಿರುವುದು ನಮ್ಮ ಸಿಹಿತಿಂಡಿಗಳ ತಯಾರಿಕೆಗೆ ದೊಡ್ಡ ಅಡ್ಡಿಯಾಗಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯಾವ ಉತ್ಪನ್ನಗಳಿಗೆ ಸಂಕಷ್ಟ?

ನಂದಿನಿಯ ಮೈಸೂರು ಪಾಕ್, ಪೇಡಾ, ಕುಂದಾ ಹಾಗೂ ಬೆಲ್ಲದ ವಿವಿಧ ಸಿಹಿತಿಂಡಿಗಳ ತಯಾರಿಕೆಗೆ ಹೆಚ್ಚಿನ ಪ್ರಮಾಣದ ಶಾಖದ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಕೆಎಂಎಫ್ ಮಾಸಿಕ ನೂರಾರು ವಾಣಿಜ್ಯ ಸಿಲಿಂಡರ್‌ಗಳನ್ನು ಬಳಸುತ್ತದೆ. ಈಗ ಗ್ಯಾಸ್ ಸಿಗದ ಕಾರಣ ಇವುಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳ ಕೊರತೆ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಯುಗಾದಿ ಹಬ್ಬಕ್ಕೆ ಹೊಡೆತ:

ಮುಂದಿನ ವಾರವಷ್ಟೇ ಯುಗಾದಿ ಹಬ್ಬವಿದ್ದು, ನಂದಿನಿ ಮಳಿಗೆಗಳಲ್ಲಿ ಸಿಹಿತಿಂಡಿಗಳಿಗೆ ಭಾರಿ ಬೇಡಿಕೆ ಇರುತ್ತದೆ. ಇಂತಹ ಸಮಯದಲ್ಲಿ ಉತ್ಪಾದನೆ ಕುಂಠಿತಗೊಂಡರೆ ಕೆಎಂಎಫ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗುವುದಲ್ಲದೆ, ಗ್ರಾಹಕರಿಗೂ ನಿರಾಸೆಯಾಗಲಿದೆ.

ಸರ್ಕಾರಕ್ಕೆ ತುರ್ತು ಮನವಿ:

ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಸರಿಪಡಿಸಲು ಕೆಎಂಎಫ್ ಈಗಾಗಲೇ ಸರ್ಕಾರದ ಮೊರೆ ಹೋಗಿದೆ. ಪಶ್ಚಿಮ ಏಷ್ಯಾದ ಯುದ್ಧದ ನೆರಳಿನಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿಲ ಪೂರೈಕೆ ವ್ಯತ್ಯಯವಾಗಿದ್ದರೂ, ಸರ್ಕಾರವು ಆದ್ಯತೆಯ ಮೇರೆಗೆ ಕೆಎಂಎಫ್ ಅಂತಹ ಸಹಕಾರಿ ಸಂಸ್ಥೆಗಳಿಗೆ ಗ್ಯಾಸ್ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

 


Share this with Friends

Related Post