Wed. Jul 22nd, 2026

ಖಾಸಗಿ ಸಹಭಾಗಿತ್ವದಲ್ಲಿ ‘ಮಯೂರ’ ಹೋಟೆಲ್‌ಗಳ ಕಾಯಕಲ್ಪ; ನಂದಿಬೆಟ್ಟಕ್ಕೆ ಶೀಘ್ರವೇ ರೋಪ್‌ವೇ ಮತ್ತು ಖಾಸಗಿ ವಾಹನ ನಿರ್ಬಂಧ! 

Share this with Friends

ಬೆಂಗಳೂರು/ನಂದಿಗಿರಿಧಾಮ:ರಾಜ್ಯದ ಸರ್ಕಾರಿ ಸ್ವಾಮ್ಯದ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಜಾಗತಿಕ ಗುಣಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ‘ಮಯೂರ’ ಸರಣಿ ಹೋಟೆಲ್‌ಗಳು ಹಾಗೂ ಇತರೆ ಆತಿಥ್ಯ ಕೇಂದ್ರಗಳನ್ನು ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ ಮತ್ತು ವೃತ್ತಿಪರ ನಿರ್ವಹಣಾ ಪದ್ಧತಿಗಳನ್ನು ಬಳಸಿಕೊಂಡು ಹಂತ ಹಂತವಾಗಿ ಆಧುನೀಕರಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಪ್ರಕಟಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಕೆಎಸ್‌ಟಿಡಿಸಿ (KSTDC) ವತಿಯಿಂದ ನೂತನವಾಗಿ ನಿರ್ಮಿಸಲಾದ ‘ಮಯೂರ ಸನ್‌ರೈಸ್ ರೆಸ್ಟೋರೆಂಟ್’ ಅನ್ನು ಉದ್ಘಾಟಿಸಿ ಮಾತನಾಡಿದ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಇಲಾಖೆ ವ್ಯಾಪ್ತಿಯ ‘ಮಯೂರ’ ಸರಣಿ ಹೋಟೆಲ್‌ಗಳನ್ನು ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ ಮತ್ತು ಅತ್ಯುತ್ತಮ ನಿರ್ವಹಣಾ ಪದ್ಧತಿಗಳನ್ನು ಬಳಸಿಕೊಂಡು ಹಂತ ಹಂತವಾಗಿ ಉನ್ನತೀಕರಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ತಜ್ಞರ ಸಲಹಾ ಸಮಿತಿ ರಚನೆ – ಸರ್ಕಾರದ ಬಳಿಯೇ ಇರಲಿದೆ ಮಾಲೀಕತ್ವ:

ಮಯೂರ ಹೋಟೆಲ್‌ಗಳ ವಿನ್ಯಾಸ, ಆಹಾರ ಸೇವೆ ಮತ್ತು ನಿರ್ವಹಣಾ ಗುಣಮಟ್ಟವನ್ನು ಸುಧಾರಿಸಲು ದೇಶದ ಪ್ರಮುಖ ಹೋಟೆಲ್ ಉದ್ಯಮಿಗಳು ಹಾಗೂ ಪ್ರವಾಸೋದ್ಯಮ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಗುವುದು. ಈ ಹೋಟೆಲ್‌ಗಳ ಸಂಪೂರ್ಣ ಮಾಲೀಕತ್ವವು ಸರ್ಕಾರದ ಬಳಿಯೇ ಮುಂದುವರಿಯಲಿದ್ದು, ಖಾಸಗಿ ವಲಯದ ತಾಂತ್ರಿಕ ಪರಿಣತಿಯನ್ನು ಮಾತ್ರ ಬಳಸಿಕೊಳ್ಳಲಾಗುವುದು. ಮಧ್ಯಮ ವರ್ಗದ ಕುಟುಂಬಗಳಿಗೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ದರ್ಜೆಯ ಪ್ರೀಮಿಯಂ ಸೇವೆಗಳನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ನಂದಿಬೆಟ್ಟಕ್ಕೆ ಖಾಸಗಿ ವಾಹನ ನಿರ್ಬಂಧ ಮತ್ತು ರೋಪ್‌ವೇ ಯೋಜನೆ:

ನಂದಿಬೆಟ್ಟದಲ್ಲಿ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಇನ್ಮುಂದೆ ಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಕೆಳಭಾಗದಲ್ಲಿಯೇ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು. ಅಲ್ಲಿಂದ ಪ್ರವಾಸಿಗರ ಸಂಚಾರಕ್ಕಾಗಿ ನಿಯೋಜಿತ ಇಕೋ-ಫ್ರೆಂಡ್ಲಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಬಹುನಿರೀಕ್ಷಿತ ನಂದಿಬೆಟ್ಟ ರೋಪ್‌ವೇ (Nandi Hills Ropeway) ಯೋಜನೆಗೆ ಅಗತ್ಯವಿರುವ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಪ್ರಕ್ರಿಯೆಯನ್ನು ಅತ್ಯಂತ ವೇಗಗೊಳಿಸಲಾಗಿದ್ದು, ನವದೆಹಲಿಯಲ್ಲಿ ವಿಶೇಷ ಸಮನ್ವಯ ವ್ಯವಸ್ಥೆಯನ್ನು ರೂಪಿಸುವ ಮೂಲಕ ತ್ವರಿತವಾಗಿ ಯೋಜನೆಯನ್ನು ಅನುಷ್ಠಾನದ ಹಂತಕ್ಕೆ ತರಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್, ಇಲಾಖೆಯ ಆಯುಕ್ತ ಶಿವಪ್ರಸಾದ್ ಪಿ.ಆರ್. ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 


Share this with Friends

Related Post