ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಹೈಕಮಾಂಡ್ ಹಠಾತ್ ಅಭ್ಯರ್ಥಿಯನ್ನು ಘೋಷಿಸಿದ್ದು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಈ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, “ಬಿಜೆಪಿ ಅಭ್ಯರ್ಥಿಯ ಹೆಸರು ಕೇಳಿ ನನಗೆ ಶಾಕ್ ಆಯಿತು. ಕಳೆದ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದ ಅಭ್ಯರ್ಥಿಗೆ (ಬಿ.ಜಿ. ಅಜಯ್ ಕುಮಾರ್) ಮತ್ತೆ ಟಿಕೆಟ್ ನೀಡುವಂತೆ ನಾವು ಹಿರಿಯ ನಾಯಕರಲ್ಲಿ ಮನವಿ ಮಾಡಿದ್ದೆವು. ಕ್ಷೇತ್ರದಲ್ಲಿ ಅವರಿಗೆ ಉತ್ತಮ ಸಂಪರ್ಕವಿತ್ತು ಮತ್ತು ಅವರೇ ಗೆಲ್ಲುವ ಕುದುರೆ ಎಂದು ನಾವು ಭಾವಿಸಿದ್ದೆವು,” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
“ಅಜಯ್ ಕುಮಾರ್ ಪರವಾಗಿ ನಾವು ದೆಹಲಿಯವರೆಗೂ ಹೋಗಿ ವರಿಷ್ಠರ ಮೇಲೆ ಒತ್ತಡ ಹೇರಿದ್ದೆವು. ಆದರೆ ಹೈಕಮಾಂಡ್ ಈಗ ಹೊಸ ಮುಖಕ್ಕೆ ಮಣೆ ಹಾಕಿದೆ. ಮೊದಲಿಗೆ ಈ ಹೆಸರು ಕೇಳಿ ನಂಬಲು ಸಾಧ್ಯವಾಗಲಿಲ್ಲ. ಆದರೂ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಇಂತಹ ದೊಡ್ಡ ಅವಕಾಶ ಸಿಗುತ್ತದೆ ಎಂಬುದು ಈ ಮೂಲಕ ಸಾಬೀತಾಗಿದೆ,” ಎಂದರು.
ಮುಂದುವರಿದು ಮಾತನಾಡಿದ ಅವರು, “ನಮಗೆ ವೈಯಕ್ತಿಕ ನಿರ್ಧಾರಗಳಿಗಿಂತ ಪಕ್ಷದ ಹಿತವೇ ಮುಖ್ಯ. ಹೈಕಮಾಂಡ್ ತೀರ್ಮಾನವನ್ನು ಗೌರವಿಸುತ್ತೇವೆ. ಕ್ಷೇತ್ರದಲ್ಲಿ ಕಮಲ ಅರಳಿಸಲು ಹಾಗೂ ಶ್ರೀನಿವಾಸ್ ದಾಸಕರಿಯಪ್ಪ ಅವರ ಗೆಲುವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.

