ಬೆಂಗಳೂರು: “ದಾವಣಗೆರೆ ನಗರದ ಅಭಿವೃದ್ಧಿಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅನನ್ಯ. ಬೆಂಗಳೂರಿಗಿಂತಲೂ ಸುಂದರವಾಗಿ ದಾವಣಗೆರೆಯನ್ನು ಅವರು ಕಟ್ಟಿದ್ದಾರೆ. ಅವರ 40 ವರ್ಷಗಳ ಜನಸೇವೆ ಮತ್ತು ಪಕ್ಷನಿಷ್ಠೆಯನ್ನು ಪರಿಗಣಿಸಿ ಒಮ್ಮತದಿಂದ ಟಿಕೆಟ್ ನೀಡಲಾಗಿದೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದ್ದು, ಪಕ್ಷದ ಹಿರಿಯ ನಾಯಕರು ಹಾಗೂ ಅಲ್ಪಸಂಖ್ಯಾತ ಮುಖಂಡರ ನಡುವಿನ ಸುದೀರ್ಘ ಚರ್ಚೆಯ ಬಳಿಕ ‘ಒಮ್ಮತದ ಅಭ್ಯರ್ಥಿ’ಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ.
“ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಹಾಗೂ ಬಾಗಲಕೋಟೆ ಕ್ಷೇತ್ರಕ್ಕೆ ಎಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ,” ಎಂದು ಪ್ರಕಟಿಸಿದರು.
ನಾಯಕರ ಸಮನ್ವಯದ ಗೆಲುವು:
“ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರಾದ ಜಮೀರ್ ಅಹಮದ್, ನಾಸೀರ್ ಹುಸೇನ್, ಸಲೀಂ ಅಹ್ಮದ್, ಹ್ಯಾರಿಸ್ ಮತ್ತು ಜಬ್ಬಾರ್ ಅವರು ಎಐಸಿಸಿ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಶಾಮನೂರು ಕುಟುಂಬಕ್ಕೆ ಅವಕಾಶ ಮಾಡಿಕೊಡುವ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ,” ಎಂದು ಡಿಕೆಶಿ ವಿವರಿಸಿದರು.
ನಾಳೆ ನಾಮಪತ್ರ ಸಲ್ಲಿಕೆ:
ಸೋಮವಾರ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ನಡೆಯಲಿರುವ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಖುದ್ದಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ಅಭ್ಯರ್ಥಿಗಳ ಕೈಗೆ ಬಿ-ಫಾರಂ ತಲುಪಿಸಲಾಗಿದ್ದು, ನಾಮಪತ್ರ ಸಲ್ಲಿಕೆಯ ಬಳಿಕ ಪ್ರಚಾರ ಕಾರ್ಯ ಚುರುಕುಗೊಳ್ಳಲಿದೆ.
ಮುಂದಿನ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಬುಧವಾರ ಶಾಸಕಾಂಗ ಪಕ್ಷದ (CLP) ಸಭೆ ಕರೆಯಲಾಗಿದ್ದು, ಎಐಸಿಸಿ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಲ್ಪಸಂಖ್ಯಾತರ ಬೇಡಿಕೆ ಸಹಜ:
“ರಾಜಕಾರಣದಲ್ಲಿ ಟಿಕೆಟ್ ಆಕಾಂಕ್ಷಿಗಳು ಇರುವುದು ಮತ್ತು ಜನಸಂಖ್ಯೆ ಆಧಾರದ ಮೇಲೆ ಅಲ್ಪಸಂಖ್ಯಾತರು ಅವಕಾಶ ಕೇಳುವುದು ತಪ್ಪಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದೇ ದಾವಣಗೆರೆಯಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುವ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ,”
“ಅಲ್ಪಸಂಖ್ಯಾತ ನಾಯಕರು ಟಿಕೆಟ್ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಆಸೆ ನ್ಯಾಯಯುತವಾದುದು. ದಾವಣಗೆರೆ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ನಾನು ಎಲ್ಲಾ ಪ್ರಮುಖ ಅಲ್ಪಸಂಖ್ಯಾತ ನಾಯಕರೊಂದಿಗೆ ಚರ್ಚಿಸಿದ್ದೇವೆ. ಪಕ್ಷದ ಹಿತದೃಷ್ಟಿಯಿಂದ ಈಗ ಒಮ್ಮತಕ್ಕೆ ಬರಲಾಗಿದೆ. ಒಂದು ವೇಳೆ ಪಕ್ಷ ಸೂಚಿಸಿದರೆ ನಾಮಪತ್ರ ವಾಪಸ್ ಪಡೆಯುವುದಾಗಿ ಮಲ್ಲಿಕಾರ್ಜುನ್ ಅವರೂ ತಿಳಿಸಿದ್ದರು,” ಎಂದರು.
ಕುಟುಂಬದಲ್ಲೂ ಇರುತ್ತದೆ ಪೈಪೋಟಿ:
ಟಿಕೆಟ್ ಪೈಪೋಟಿ ಬಗ್ಗೆ ವಿವರಿಸಿದ ಡಿಕೆಶಿ, “ಬಾಗಲಕೋಟೆಯ ಮೇಟಿ ಕುಟುಂಬದಲ್ಲೇ ನಾಲ್ವರು ಆಕಾಂಕ್ಷಿಗಳಿದ್ದರು. ಕುಟುಂಬದ ಸದಸ್ಯರಲ್ಲೇ ಸ್ಪರ್ಧೆ ಇರುವಾಗ ಬೇರೆಯವರು ಕೇಳುವುದು ಸಹಜ. ಬಾಗಲಕೋಟೆಗೆ ಹಲವು ಹೆಸರುಗಳು ಬಂದಿದ್ದವು, ಅಂತಿಮವಾಗಿ ಉಮೇಶ್ ಮೇಟಿ ಅವರಿಗೆ ಅವಕಾಶ ನೀಡಲಾಗಿದೆ. ಸಮರ್ಥ್ ಮಲ್ಲಿಕಾರ್ಜುನ ಅವರ ತಾಯಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಸಂಸತ್ ಚುನಾವಣೆಗೆ ನಿಲ್ಲುವ ಆಸೆಯಿರಲಿಲ್ಲ, ಒತ್ತಾಯದ ಮೇಲೆ ನಿಲ್ಲಿಸಲಾಗಿದೆ. ಈಗ ಅವರು ಪಕ್ಷದ ಆಸ್ತಿಯಾಗಿ ಬೆಳೆಯುತ್ತಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ:
ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಲೇವಡಿ ಮಾಡಿದ ಅವರು, “ರಾಜಕಾರಣದಲ್ಲಿ ವಿಭಜನೆ ಮಾಡುವುದು ಸಾಮಾನ್ಯ. ಅವರಲ್ಲಿ ಒಮ್ಮತವಿದೆಯೇ? ಇಬ್ಬರ ಗಲಾಟೆಯಿಂದಾಗಿ ಮೂರನೆಯವರಿಗೆ ಟಿಕೆಟ್ ನೀಡಿದ್ದಾರೆ. ಅದು ಅವರ ಪಕ್ಷದ ತೀರ್ಮಾನ, ನಮ್ಮದು ನಮ್ಮ ಪಕ್ಷದ ನಿರ್ಧಾರ. ನಮ್ಮ ಗುರಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಗೆಲ್ಲುವುದು,” ಎಂದು ಸಾರಿದರು
ಅಲ್ಪಸಂಖ್ಯಾತರಿಗೆ ಪರ್ಯಾಯ ಅವಕಾಶ:
ಶಾಮನೂರು ಅವರು ನೀಡಿದ್ದ ಭರವಸೆಯಂತೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ ಎಂಬ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, “ಪಕ್ಷದಲ್ಲಿ ಆಗಾಗ್ಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಅಲ್ಪಸಂಖ್ಯಾತ ನಾಯಕರಾದ ಜಬ್ಬಾರ್ ಅವರನ್ನು ಮೂರು ಬಾರಿ ಎಂಎಲ್‌ಸಿ ಮಾಡಲಾಗಿದೆ. ಧಾರವಾಡದಲ್ಲಿ ಮಾನೆ ಅವರ ಬದಲಿಗೆ ಸಲೀಂ ಅಹಮದ್ ಅವರಿಗೆ ಅವಕಾಶ ನೀಡಿದ್ದೇವೆ. ಹೀಗೆ ಸಂದರ್ಭಕ್ಕೆ ತಕ್ಕಂತೆ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ,” ಎಂದರು.
ಶಾಮನೂರು ಸೇವೆ ಸ್ಮರಿಸಿದ ಡಿಕೆಶಿ:
“ದಾವಣಗೆರೆಯಲ್ಲಿ ಕುಡಿಯುವ ನೀರು, ಬಡವರಿಗೆ ಮನೆ ಹಾಗೂ ಗುಣಮಟ್ಟದ ವಿದ್ಯಾಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಶಾಮನೂರು ಕುಟುಂಬ ಜಿಲ್ಲೆಯ ಚಿತ್ರಣವನ್ನೇ ಬದಲಿಸಿದೆ. ಅವರ ಕುಟುಂಬ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದೆ. ಪ್ರತಿಪಕ್ಷಗಳು ಯಾರನ್ನಾದರೂ ಕಣಕ್ಕಿಳಿಸಲಿ, ನಾವು ನಮ್ಮ ಅಭಿವೃದ್ಧಿ ಕೆಲಸಗಳ ಮೇಲೆ ನಂಬಿಕೆಯಿಟ್ಟು ಚುನಾವಣೆ ಎದುರಿಸುತ್ತೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆ ದಿಕ್ಸೂಚಿಯೇ?
ಸರ್ಕಾರಕ್ಕೆ ಮೂರು ವರ್ಷ ತುಂಬಿದ ಸಂದರ್ಭದಲ್ಲಿ ಈ ಉಪಚುನಾವಣೆ ಭವಿಷ್ಯದ ದಿಕ್ಸೂಚಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರತಿಪಕ್ಷಗಳು ಈವರೆಗೆ ಯಾವ ಚುನಾವಣೆ ಗೆದ್ದಿವೆ? ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಹಾಗೂ ಕುಮಾರಸ್ವಾಮಿ ಅವರ ಪುತ್ರ ಸ್ಪರ್ಧಿಸಿದ್ದ ಕ್ಷೇತ್ರಗಳನ್ನೇ ನಾವು ಗೆದ್ದುಕೊಂಡಿದ್ದೇವೆ. ಜನಾದೇಶ ನಮ್ಮ ಪರವಾಗಿದೆ ಎಂಬುದು ಈಗಾಗಲೇ ಸಾಬೀತಾಗಿದೆ,” ಎಂದು ತಿರುಗೇಟು ನೀಡಿದರು.

