Sat. Jun 6th, 2026

ದಾವಣಗೆರೆ ದಕ್ಷಿಣದಲ್ಲಿ 23 ಮುಸ್ಲಿಂ ಅಭ್ಯರ್ಥಿಗಳ ಲಗ್ಗೆ: ಅಖಾಡಕ್ಕಿಳಿಯಲಿದ್ದಾರೆ ಜಮೀರ್!

Share this with Friends

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಈಗ ರಾಜ್ಯ ರಾಜಕಾರಣದ ಕುತೂಹಲದ ಕೇಂದ್ರಬಿಂದುವಾಗಿದೆ. ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿರುವ ಈ ಕ್ಷೇತ್ರದಲ್ಲಿ ಈ ಬಾರಿ ಅನಿರೀಕ್ಷಿತ ತಿರುವು ಕಂಡುಬಂದಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸುಮಾರು 23 ಮುಸ್ಲಿಂ ಅಭ್ಯರ್ಥಿಗಳು ಎಸ್ಡಿಪಿಐ, ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿರುವುದು ‘ಕೈ’ ಪಾಳಯದಲ್ಲಿ ನಡುಕ ಹುಟ್ಟಿಸಿದೆ.

ಈ ಬಂಡಾಯದ ಬೇಗೆಯನ್ನು ಆರಿಸಲು ಮತ್ತು ಚದುರಿ ಹೋಗಲಿರುವ ಮತಗಳನ್ನು ಕ್ರೋಢೀಕರಿಸಲು ಕಾಂಗ್ರೆಸ್‌ನ ಸಂಕಟಹರನಾಗಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಈಗ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಬಂಡಾಯದ ಬಿಸಿ – ಜಮೀರ್ ರಣತಂತ್ರ:

ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ. ಆದರೆ, ಈ ಬಾರಿ ಸಮುದಾಯದ ನಾಯಕರಿಗೆ ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡ 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಇದು ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಗೆಲುವಿನ ಹಾದಿಗೆ ಮುಳ್ಳಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ, ಏಪ್ರಿಲ್ 3 ರಿಂದ 7ನೇ ತಾರೀಕಿನವರೆಗೆ ಸತತ ಐದು ದಿನಗಳ ಕಾಲ ಜಮೀರ್ ಅಹಮದ್ ದಾವಣಗೆರೆಯಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ.

ಮನವೊಲಿಕೆ ಕಸರತ್ತು:

ತಮ್ಮ ಸಮುದಾಯದ ಮೇಲೆ ಅಪಾರ ಹಿಡಿತ ಹೊಂದಿರುವ ಜಮೀರ್ ಅಹಮದ್, ಬಂಡಾಯ ಎದ್ದಿರುವ ಅಭ್ಯರ್ಥಿಗಳ ಮನವೊಲಿಸುವ ಜವಾಬ್ದಾರಿ ಹೊತ್ತಿದ್ದಾರೆ. “ದಾವಣಗೆರೆ ದಕ್ಷಿಣ ಕಾಂಗ್ರೆಸ್‌ನ ಭದ್ರಕೋಟೆ, ಇದನ್ನು ಯಾವುದೇ ಕಾರಣಕ್ಕೂ ಸೋಲಲು ಬಿಡುವುದಿಲ್ಲ,” ಎಂದು ಗುಡುಗಿರುವ ಅವರು, ಅತೃಪ್ತ ನಾಯಕರನ್ನು ಭೇಟಿ ಮಾಡಿ ನಾಮಪತ್ರ ಹಿಂಪಡೆಯುವಂತೆ ಅಥವಾ ಪಕ್ಷದ ಪರ ಕೆಲಸ ಮಾಡುವಂತೆ ಒಲಿಸಿಕೊಳ್ಳುವ ‘ಡ್ಯಾಮೇಜ್ ಕಂಟ್ರೋಲ್’ ಕಾರ್ಯಾಚರಣೆ ನಡೆಸಲಿದ್ದಾರೆ.

ಪ್ರತಿಷ್ಠೆಯ ಕಣ:

ಸಮರ್ಥ್ ಶಾಮನೂರು ಅವರ ಪರವಾಗಿ ಮತಯಾಚಿಸುವುದರ ಜೊತೆಗೆ, ಅಲ್ಪಸಂಖ್ಯಾತ ಮತದಾರರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವುದು ಜಮೀರ್ ಮುಂದಿರುವ ಸವಾಲು. ಬಿಜೆಪಿ ಈ ಪರಿಸ್ಥಿತಿಯ ಲಾಭ ಪಡೆಯಲು ಹೊಂಚು ಹಾಕುತ್ತಿದ್ದು, ಜಮೀರ್ ಅವರ ಈ 5 ದಿನಗಳ ಮಿಂಚಿನ ಸಂಚಲನವು ಕ್ಷೇತ್ರದ ರಾಜಕೀಯ ಸಮೀಕರಣವನ್ನು ಹೇಗೆ ಬದಲಿಸಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

 


Share this with Friends

Related Post