Sat. Jun 6th, 2026

ಐಪಿಎಲ್ 2026: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ‘ಎಐ’ ಕಣ್ಗಾವಲು; ಭದ್ರತೆಗೆ ಹೈಟೆಕ್ ಸ್ಪರ್ಶ!

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28 ರಿಂದ ಆರಂಭವಾಗಲಿರುವ ಐಪಿಎಲ್ 2026ರ ಪಂದ್ಯಗಳ ಭದ್ರತೆಗಾಗಿ ಈ ಬಾರಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಮುಂಚೂಣಿಗೆ ತರಲಾಗಿದೆ. ಅತ್ಯಾಧುನಿಕ ‘ಎಐ ಕ್ರೌಡ್ ಅನಾಲಿಟಿಕ್ಸ್’ ಮೂಲಕ ಪ್ರೇಕ್ಷಕರ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆಗೆ ನಗರ ಪೊಲೀಸ್ ಇಲಾಖೆ ಸಜ್ಜಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆಗೆ ಈ ಬಾರಿ ಹೆಚ್ಚಿನ ಒತ್ತು ನೀಡಲಾಗಿದೆ. ಕ್ರೀಡಾಂಗಣದ ಸುತ್ತಮುತ್ತ ಸುಮಾರು 500ಕ್ಕೂ ಹೆಚ್ಚು ಹೈ-ರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವು ಎಐ ತಂತ್ರಜ್ಞಾನದ ಮೂಲಕ ಜನಸಂದಣಿಯ ಏರಿಳಿತವನ್ನು ನೈಜ ಸಮಯದಲ್ಲಿ (Real-time) ವಿಶ್ಲೇಷಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ನೀಡಲಿವೆ ಎಂದರು.

ಡಿಜಿಟಲ್ ಎಂಟ್ರಿ: ಕ್ರೀಡಾಂಗಣದ ಪ್ರವೇಶ ದ್ವಾರಗಳಲ್ಲಿ ಡಿಜಿಟಲ್ ಟಿಕೆಟ್ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾನ್ಯ ಟಿಕೆಟ್ ಇಲ್ಲದವರಿಗೆ ಕ್ರೀಡಾಂಗಣದ ಸಮೀಪದ ಪ್ರದೇಶಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ‌ ಎಂದರು.

ದಟ್ಟಣೆ ಮುಕ್ತ ಸಂಚಾರ: ಎಂ.ಜಿ ರಸ್ತೆ, ಕಬ್ಬನ್ ರಸ್ತೆ ಮತ್ತು ಕ್ವೀನ್ಸ್ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಪ್ರೇಕ್ಷಕರು ವೈಯಕ್ತಿಕ ವಾಹನಗಳ ಬದಲಿಗೆ ಮೆಟ್ರೋ ಮತ್ತು ಬಿಎಂಟಿಸಿ ಬಸ್‌ಗಳನ್ನು ಬಳಸುವಂತೆ ಸೂಚಿಸಲಾಗಿದ್ದು, ಟಿಕೆಟ್ ಹೊಂದಿರುವವರಿಗೆ ಮೆಟ್ರೋದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ತುರ್ತು ವೈದ್ಯಕೀಯ ಸೇವೆ: ಯಾವುದೇ ತುರ್ತು ಸಂದರ್ಭ ಎದುರಿಸಲು 9 ಅಂಬುಲೆನ್ಸ್ ಹಾಗೂ 4 ಹೈಟೆಕ್ ಟ್ರಯೇಜ್ ಸೆಂಟರ್ (ವೈದ್ಯಕೀಯ ಚಿಕಿತ್ಸಾ ಕೇಂದ್ರ) ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದರು.

ಪೊಲೀಸ್ ಆಯುಕ್ತರ ಮನವಿ:

“ತಂತ್ರಜ್ಞಾನದ ಸಹಾಯದಿಂದ ನಾವು ಗರಿಷ್ಠ ಭದ್ರತೆ ನೀಡುತ್ತಿದ್ದೇವೆ. ಪ್ರೇಕ್ಷಕರು ಪಂದ್ಯದ ಆರಂಭಕ್ಕಿಂತ 4 ಗಂಟೆ ಮುಂಚಿತವಾಗಿ ಕ್ರೀಡಾಂಗಣಕ್ಕೆ ಆಗಮಿಸಿ ಸಹಕರಿಸಬೇಕು. ಪಟಾಕಿ, ಲೇಸರ್ ಲೈಟ್‌ಗಳಂತಹ ನಿಷೇಧಿತ ವಸ್ತುಗಳನ್ನು ತರಬಾರದು” ಎಂದು ಆಯುಕ್ತರು ತಿಳಿಸಿದ್ದಾರೆ.


Share this with Friends

Related Post