ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಶ್ರೀಗಂಧದ ಕಾವಲ್ನಲ್ಲಿರುವ ಸುಮಾರು 444 ಎಕರೆ ಅರಣ್ಯ ಭೂಮಿಯನ್ನು ತಕ್ಷಣವೇ ಮರು ವಶಕ್ಕೆ ಪಡೆಯುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಸ್ತುತ ಭಾರತೀಯ ವಾಯುಪಡೆಯ (IAF) ವಶದಲ್ಲಿರುವ ಈ ಜಾಗದ ಮಂಜೂರಾತಿಯನ್ನು ರಾಜ್ಯ ಸರ್ಕಾರವು 2017ರ ಅಕ್ಟೋಬರ್ 9ರಂದೇ ರದ್ದುಗೊಳಿಸಿದೆ. ಆದರೂ, ಭೂಮಿಯನ್ನು ಹಸ್ತಾಂತರಿಸದೆ ನಿಯಮಬಾಹಿರವಾಗಿ ಬಳಸಲಾಗುತ್ತಿದೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64ಎ ಅಡಿಯಲ್ಲಿ ಒತ್ತುವರಿ ತೆರವು ಪ್ರಕ್ರಿಯೆ ಆರಂಭಿಸಲು ನಿರ್ದೇಶಿಸಿದ್ದಾರೆ.
ಶ್ವಾಸತಾಣದ ಸಂರಕ್ಷಣೆ ಆದ್ಯತೆ:
ಬೆಂಗಳೂರಿನಂತಹ ಮಹಾನಗರದಲ್ಲಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ಈ ಅರಣ್ಯ ಪ್ರದೇಶವು ಪ್ರಮುಖ ‘ಶ್ವಾಸತಾಣ’ (Lung Space) ಆಗಿ ಉಳಿಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಯಾವುದೇ ವಿಳಂಬವಿಲ್ಲದೆ ಭೂಮಿಯನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಪರಿವೇಶ್ ಪೋರ್ಟಲ್ ಅನುಮತಿ ಕಡ್ಡಾಯ:
ಈ ಭೂಮಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾದರೆ, ಅರಣ್ಯ (ಸಂರಕ್ಷಣಾ) ಕಾಯ್ದೆ-1980ರ ಅನ್ವಯ ಕೇಂದ್ರ ಸರ್ಕಾರದ ‘ಪರಿವೇಶ್’ ಪೋರ್ಟಲ್ ಮೂಲಕ ಅಧಿಕೃತ ಅನುಮತಿ ಪಡೆಯುವುದು ಇನ್ನು ಮುಂದೆ ಕಡ್ಡಾಯವಾಗಿದೆ. ಈ ಬಗ್ಗೆ ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. “ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪರಿಸರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ” ಎಂದು ಸಚಿವರು ಪುನರುಚ್ಚರಿಸಿದ್ದಾರೆ.

