Fri. Jun 5th, 2026

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಇನ್ಮುಂದೆ ಹಿಂದಿ ಅಂಕಗಳು ರಿಸಲ್ಟ್‌ಗೆ ಕೌಂಟ್ ಆಗಲ್ಲ!

Share this with Friends

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯನ್ನು ಕೇವಲ ‘ಗ್ರೇಡಿಂಗ್‌’ ವ್ಯವಸ್ಥೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.

ವಿಧಾನಸಭಾ ಅಧಿವೇಶನದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, “ಇದುವರೆಗೆ ಒಟ್ಟು 625 ಅಂಕಗಳಿಗೆ ಪರೀಕ್ಷೆ ನಡೆಯುತ್ತಿತ್ತು. ಇದರಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಇನ್ಮುಂದೆ ತೃತೀಯ ಭಾಷೆಯಲ್ಲಿ ಪಡೆದ ಅಂಕಗಳನ್ನು ಅಂತಿಮ ಫಲಿತಾಂಶದ ಒಟ್ಟು ಅಂಕಗಳಿಗೆ ಪರಿಗಣಿಸುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳ ಸಾಧನೆಗೆ ಅನುಗುಣವಾಗಿ ಎ, ಬಿ, ಸಿ ಅಥವಾ ಡಿ ಗ್ರೇಡ್‌ಗಳನ್ನು ಮಾತ್ರ ನೀಡಲಾಗುವುದು,” ಎಂದು ವಿವರಿಸಿದರು.

ಪಾಸ್-ಫೇಲ್ ಪದ್ಧತಿ ಇರಲ್ಲ:

ಹೊಸ ನಿಯಮದ ಪ್ರಕಾರ ತೃತೀಯ ಭಾಷೆಯಲ್ಲಿ ‘ಪಾಸ್‌ ಅಥವಾ ಫೇಲ್‌’ ಎಂಬ ಪದ್ಧತಿ ಇರುವುದಿಲ್ಲ. ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ಇತರ ಪ್ರಮುಖ ವಿಷಯಗಳತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಈ ಕುರಿತ ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ ಎಂದರು.

ಉಚಿತ ನೈತಿಕ ಶಿಕ್ಷಣ ಪುಸ್ತಕ:

ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ‘ನೈತಿಕ ಶಿಕ್ಷಣ’ (Moral Science) ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ ಎಂದು ಸಚಿವರು ವಿವರಿಸಿದರು.

ಸೋಶಿಯಲ್ ಮೀಡಿಯಾ ಬಳಕೆಗೆ ಬ್ರೇಕ್:

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ದೃಷ್ಟಿಯಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸುವ ಮಹತ್ವದ ಪ್ರಸ್ತಾಪವನ್ನು ಸದನದಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಎಲ್ಲರಿಂದಲೂ ಬೆಂಬಲ ವ್ಯಕ್ತವಾಗಿದ್ದು, ಪೋಷಕರು ಕೂಡ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅವರು ಮನವಿ ಮಾಡಿದರು.

“ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಪಾರದರ್ಶಕತೆ ನಮ್ಮ ಗುರಿ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಾರ್ಷಿಕ 3 ಪರೀಕ್ಷೆಗಳನ್ನು ನಡೆಸುವ ಮೂಲಕ ಅಂಕ ಸುಧಾರಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ,” ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

 


Share this with Friends

Related Post