ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ (ಹಿಂದಿ ಸೇರಿದಂತೆ) ಅಂಕಗಳನ್ನು ಕೇವಲ ಗ್ರೇಡ್‌ಗೆ ಸೀಮಿತಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಈ ನಿರ್ಧಾರದಿಂದ ಒಂದು ವೇಳೆ ಸರ್ಕಾರ ಹಿಂದೆ ಸರಿದರೆ ರಾಜ್ಯಾದ್ಯಂತ ‘ಉಗ್ರ ಹೋರಾಟ’ ಮಾಡುವುದಾಗಿ ಎಚ್ಚರಿಸಿದೆ.
ರಾಜ್ಯ ಸರ್ಕಾರದ ಈ ಐತಿಹಾಸಿಕ ಕ್ರಮವನ್ನು ಶ್ಲಾಘಿಸಿರುವ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ, ಯಾವುದೇ ಕಾರಣಕ್ಕೂ ಸರ್ಕಾರ ಈ ವಿಷಯದಲ್ಲಿ ಯಾರದ್ದೇ ಒತ್ತಡಕ್ಕೂ ಮಣಿಯಬಾರದು ಎಂದು ಸ್ಪಷ್ಟಪಡಿಸಿದ್ದಾರೆ. “ಒಮ್ಮೆ ಇಟ್ಟ ಹೆಜ್ಜೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬಾರದು. ಸರ್ಕಾರದ ಈ ನಿರ್ಧಾರದ ವಿರುದ್ಧ ಮಾತನಾಡುವವರು ‘ಕನ್ನಡ ದ್ರೋಹಿಗಳು’ ಮತ್ತು ‘ನಾಡದ್ರೋಹಿಗಳು’. ಅಂತಹವರ ವಿರುದ್ಧ ಕರವೇ ಬೀದಿಗಿಳಿದು ಹೋರಾಡಲಿದೆ” ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಗುಡುಗಿದ್ದಾರೆ.
ಹಿಂದಿ ಹೇರಿಕೆ ವಿರುದ್ಧದ ಗೆಲುವು:
“ಕಳೆದ 27 ವರ್ಷಗಳಿಂದ ನಾವು ದ್ವಿಭಾಷಾ ಶಿಕ್ಷಣ ನೀತಿಗಾಗಿ ಸತತ ಚಳವಳಿ ನಡೆಸುತ್ತಿದ್ದೇವೆ. ಈಗ ತೃತೀಯ ಭಾಷೆಗೆ ಗ್ರೇಡ್ ನೀಡುವ ಮೂಲಕ ಸರ್ಕಾರ ನಮ್ಮ ಹೋರಾಟಕ್ಕೆ ಮೊದಲ ಯಶಸ್ಸು ನೀಡಿದೆ. ಇದು ಹಿಂದಿ ಹೇರಿಕೆ ವಿರುದ್ಧದ ದೊಡ್ಡ ಜಯ,” ಎಂದು ನಾರಾಯಣಗೌಡರು ಬಣ್ಣಿಸಿದ್ದಾರೆ.
ಮಕ್ಕಳ ಮೇಲಿನ ಹೊರೆ ಇಳಿಕೆ:
ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಈ ಹಿಂದೆ 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಈಗ ಅದನ್ನು 525ಕ್ಕೆ ಇಳಿಸಿರುವುದು ಸ್ವಾಗತಾರ್ಹ. ಹಿಂದಿಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ಶಿಕ್ಷಣ ಅರ್ಧಕ್ಕೆ ನಿಲ್ಲಿಸುತ್ತಿದ್ದ ಕನ್ನಡದ ಮಕ್ಕಳಿಗೆ ಈ ನಿರ್ಧಾರವು ದೊಡ್ಡ ಆಸರೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಈ ದಿಟ್ಟ ಕ್ರಮಕ್ಕೆ ಕರವೇ ಅಭಿನಂದನೆ ಸಲ್ಲಿಸುತ್ತದೆ ಎಂದಿದ್ದಾರೆ.

