ಬೆಂಗಳೂರು: “ಕೇಂದ್ರ ಸರ್ಕಾರವು ಕೇವಲ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತೈಲ ಬೆಲೆಯನ್ನು ಇಳಿಕೆ ಮಾಡುವ ನಾಟಕವಾಡುತ್ತಿದೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಟೀಕಿಸಿದ್ದಾರೆ.
ಶುಕ್ರವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,”ಚುನಾವಣೆ ಮುಗಿದ ತಕ್ಷಣ ಮತ್ತೆ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಲಿದೆ. ಈ ರೀತಿ ಹಿಂದೆಯೂ ಮಾಡಿದ್ದಾರೆ. ಇದೆಲ್ಲವೂ ಚುನಾವಣೆ ಗಿಮಿಕ್” ,”ಕೇಂದ್ರ ಸರ್ಕಾರ ದಿನಕ್ಕೆ 1 ಸಾವಿರ ಕೋಟಿ ಹೆಚ್ಚುವರಿ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಇದು ಯಾರಿಗೆ ತಲುಪುತ್ತಿದೆ. ಈ ಹಿಂದೆ ಇಂಧನಗಳ ಬೆಲೆ ಹೆಚ್ಚಿಸಿದಾಗ 100 ನಾಟ್ ಔಟ್ ಎಂದು ಹೋರಾಟ ಮಾಡಿದ್ದೆವು. ಈಗ ಅವರಿಗೆ ಬೇಕಾದಂತಹ ಕಂಪೆನಿಗಳಿಗೆ ಅನುಕೂಲವಾಗಲು ಟ್ರಯಲ್ ರನ್ ಮಾಡುತ್ತಿದ್ದಾರೆ” ಎಂದರು.
“ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ನಮ್ಮ ರಾಜ್ಯದ ಗ್ರಾಹಕರಿಗೆ ಅನಿಲ ಸಿಲಿಂಡರ್ ಅನ್ನು ಸರಿಯಾದ ರೀತಿಯಲ್ಲಿ ನೀಡಲು ಕೇಂದ್ರಕ್ಕೆ ಆಗುತ್ತಿಲ್ಲ”ಎಂದರು.
ಅಡುಗೆ ಅನಿಲ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಮೋಸ:
“ಹೊರ್ಮುಜ್ ದಾಟಿ ಎರಡು ಹಡಗುಗಳು ದೇಶಕ್ಕೆ ಬಂದವು. ಅದರಲ್ಲಿ ಒಂದನ್ನು ದಕ್ಷಿಣಕ್ಕೆ ಅಂದರೆ ಕರ್ನಾಟಕ, ತಮಿಳುನಾಡಿಗೆ ಕಳುಹಿಸಬಹುದಿತ್ತಲ್ಲವೇ? ಗುಜರಾತಿಗೆ ಏಕೆ ಹೋದವು. ಈಗ ಕೇರಳ, ತಮಿಳುನಾಡಿನಲ್ಲಿ ಚುನಾವಣೆಗಳಿವೆ. ದಕ್ಷಿಣದ ರಾಜ್ಯಗಳಲ್ಲಿ ಅವರ ಪ್ರಭಾವ ಇಲ್ಲ ಎನ್ನುವ ಕಾರಣಕ್ಕೆ ದಕ್ಷಿಣ ಭಾರತವನ್ನ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ” ಎಂದರು.
“ಈ ಹಿಂದೆ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಮುಸಲ್ಮಾನ ಹೆಣ್ಣುಮಗಳು ಗ್ಯಾಸ್ ನೀಡಿದ್ದಕ್ಕೆ ಧನ್ಯವಾದ ಹೇಳುತ್ತಿರುವ ಹೋರ್ಡಿಂಗ್ ಇರುತ್ತಿತ್ತು. ಈಗ ಏಕೆ ಅದನ್ನೆಲ್ಲಾ ತೆಗೆದು ಹಾಕಿದ್ದಾರೆ. ಕೇಂದ್ರ ಸರ್ಕಾರ ಪ್ರತಿದಿನ ಗ್ರಾಹಕರ ಪಿಕ್ ಪಾಕೆಟ್ ಮಾಡುತ್ತಿದೆ”ಎಂದರು.
“2014, 26 ಮೇ ತಿಂಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಾ ಹೋಯಿತು. ಪೆಟ್ರೋಲ್ 71, ಡೀಜೆಲ್ ಅನ್ನು 56 ರೂಪಾಯಿಗೆ ನೀಡಲಾಗುತ್ತಿತ್ತು. ಈಗ 103 ರೂಪಾಯಿ ಆಗಿದೆ. ಕಚ್ಚಾ ತೈಲಬೆಲೆ ಕಡಿಮೆ ಇದ್ದರೂ ನಮ್ಮಲ್ಲಿ ಬೆಲೆ ಹೆಚ್ಚಳಕ್ಕೆ ಏನು ಕಾರಣ” ಎಂದು ಪ್ರಶ್ನಿಸಿದರು.
“ನಮ್ಮನ್ನು ಕೊಲೆ ಮಾಡುತ್ತಿದ್ದಾರೆ”
ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ಹರಿಹಾಯ್ದ ಡಿಸಿಎಂ, “ಭಾರತ ಸರ್ಕಾರ ನಮ್ಮನ್ನು ಆರ್ಥಿಕವಾಗಿ ಕೊಲೆ ಮಾಡುತ್ತಿದೆ. ಚುನಾವಣೆ ಹತ್ತಿರ ಬಂದಾಗ ಜನರನ್ನು ಮರುಳು ಮಾಡಲು ಬೆಲೆ ಕಡಿಮೆ ಮಾಡುತ್ತಾರೆ. ಆದರೆ ಖಾಸಗಿ ಕಂಪನಿಗಳಾದ ‘ನಯಾರ’ ಇಂಧನ ಬೆಲೆಗಳನ್ನು ಏರಿಸುತ್ತಿವೆ. ಇದರ ಮೇಲೆ ಸರ್ಕಾರದ ನಿಯಂತ್ರಣ ಎಲ್ಲಿದೆ?” ಎಂದು ಪ್ರಶ್ನಿಸಿದರು.
ರಾಜ್ಯದ ನಿಲುವು ನಿಗೂಢ:
ಇದೇ ಸಂದರ್ಭದಲ್ಲಿ, ಕೇಂದ್ರದ ಮಾದರಿಯಲ್ಲೇ ರಾಜ್ಯ ಸರ್ಕಾರವೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ ಜನರಿಗೆ ಸಮಾಧಾನ ನೀಡಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲಾರೆ, ಆನಂತರ ಮಾತನಾಡೋಣ,” ಎಂದು ಹೇಳುವ ಮೂಲಕ ಉತ್ತರಿಸಲು ನಿರಾಕರಿಸಿದರು.
ಬೆಲೆ ಏರಿಕೆಯ ಈ ಸಂಘರ್ಷವು ಮುಂಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.

