Sat. Jun 6th, 2026

“ನನಗೆ ಐಪಿಎಲ್ ಟಿಕೆಟ್ ಬೇಡ”: ವಿಐಪಿ ಸಂಸ್ಕೃತಿ ವಿರುದ್ಧ ಸುರೇಶ್ ಕುಮಾರ್ ಬಹಿರಂಗ ನಿರಾಕರಣೆ

Share this with Friends

ಬೆಂಗಳೂರು: ಶಾಸಕರಿಗೆ ಐಪಿಎಲ್ ಪಂದ್ಯದ ಟಿಕೆಟ್ ನೀಡುವ ಸರ್ಕಾರದ ನಿರ್ಧಾರವನ್ನು ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರು ಕಟುವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ನೀಡಲಾಗುವ ಆ ಐಪಿಎಲ್ ಪಾಸ್ ಅಥವಾ ಟಿಕೆಟ್‌ಗಳನ್ನು ತಾವು ಸವಿನಯವಾಗಿ ನಿರಾಕರಿಸುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರವ ಅವರು, ರಾಜ್ಯದ ವಿಧಾನಸಭೆಯಲ್ಲಿ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾದ ಸಮಯದಲ್ಲಿ, ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ ಹಾಗೂ ಶಾಸಕರಿಗೆ ಸಿಗಬೇಕಾದ ವಿಐಪಿ ಮರ್ಯಾದೆಯ ಬಗ್ಗೆ ಗದ್ದಲ ನಡೆದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ “ಸಮಾಜವಾದಿ” ಮುಖವಾಡ ಹಾಗೂ ರಾಜಕಾರಣಿಗಳ “ವಿಐಪಿ ಹಪಹಪಿ”ಯನ್ನು ಪ್ರಶ್ನಿಸಿದರು.

ಸದನದ ಹಳಿ ತಪ್ಪಿದ ಚರ್ಚೆ:

ಕಳೆದ ಗುರುವಾರ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ ಜನರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಉಪಮುಖ್ಯಮಂತ್ರಿಗಳು ಉತ್ತರಿಸುತ್ತಿದ್ದ ಸಂದರ್ಭದಲ್ಲಿ, ಚರ್ಚೆಯ ದಿಕ್ಕು ಇದ್ದಕ್ಕಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಐಪಿಎಲ್ ಟಿಕೆಟ್ ಕಡೆಗೆ ತಿರುಗಿತು. ಶಾಸಕರಿಗೆ ಸರಿಯಾದ ಮರ್ಯಾದೆ ಸಿಗುತ್ತಿಲ್ಲ, ಟಿಕೆಟ್ ನೀಡುತ್ತಿಲ್ಲ ಎಂಬ ವಿಷಯದ ಬಗ್ಗೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ದನಿ ಎತ್ತಿದ್ದು ಅಚ್ಚರಿ ಮೂಡಿಸಿತು. ಈ ವಿದ್ಯಮಾನಕ್ಕೆ ಸ್ವತಃ ಸಭಾಧ್ಯಕ್ಷರೇ ದನಿಗೂಡಿಸಿದ್ದು ವಿಷಾದನೀಯ ಎಂದು ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ದುರಂತದ ನೆನಪು ಮತ್ತು ಇಂದಿನ ವರ್ತನೆ:

ಕಳೆದ ವರ್ಷ ಆರ್.ಸಿ.ಬಿ ವಿಜಯೋತ್ಸವದ ವೇಳೆ ನಡೆದ ಅವ್ಯವಸ್ಥೆಯಿಂದಾಗಿ 11 ಜನ ಮೃತಪಟ್ಟ ಘಟನೆಯನ್ನು ಸ್ಮರಿಸಿದ ಅವರು, ಅಂದು ನೋವು ಅನುಭವಿಸಿದ್ದ ಶಾಸಕರು ಇಂದು ಅದೇ ಪಂದ್ಯದ ಟಿಕೆಟ್‌ಗಾಗಿ ಹಠ ಹಿಡಿಯುತ್ತಿರುವುದು ವಿಪರ್ಯಾಸ. ಹೊರಗಡೆ ಜನಸಾಮಾನ್ಯರು “ನಿಮಗೆ ಜನರ ಸಮಸ್ಯೆಗಳಿಗಿಂತ ಸ್ವಂತ ಸೌಲಭ್ಯಗಳೇ ಮುಖ್ಯವೇ?” ಎಂದು ಪ್ರಶ್ನಿಸುತ್ತಿದ್ದಾರೆ. ವೇದಿಕೆಗಳ ಮೇಲೆ ‘ಜನಸೇವಕರು’ ಎಂದು ಕರೆದುಕೊಳ್ಳುವವರು ಸವಲತ್ತುಗಳಿಗಾಗಿ ಪಟ್ಟು ಹಿಡಿಯುವುದು ಜನರಲ್ಲಿ ರಾಜಕಾರಣಿಗಳ ಬಗ್ಗೆ ತಿರಸ್ಕಾರ ಮೂಡುವಂತೆ ಮಾಡುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸಮಾಜವಾದಿ ಸರ್ಕಾರದ ವಿಐಪಿ ಸಂಸ್ಕೃತಿ:

ತಮ್ಮನ್ನು ತಾವು ಸಮಾಜವಾದಿ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿ ರಾರಾಜಿಸುತ್ತಿದೆ. ಕಳೆದ ಬಾರಿ ಮೊಮ್ಮಗನನ್ನು ವಿಜಯೋತ್ಸವದ ವೇದಿಕೆಗೆ ಕರೆದೊಯ್ದಿದ್ದನ್ನು ಉಲ್ಲೇಖಿಸಿದ ಅವರು, ಅಧಿಕಾರವನ್ನು ವೈಯಕ್ತಿಕ ಪ್ರತಿಷ್ಠೆಗೆ ಬಳಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ದುರಂತ ಎಂದು ಪೋಸ್ಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ತ್ವರಿತ ನಿರ್ಧಾರಕ್ಕೆ ಆಶ್ಚರ್ಯ:

ವಿಧಾನಸಭೆಯಲ್ಲಿ ಶಾಸಕರ ಗೌರವ ಮತ್ತು ಐಪಿಎಲ್ ಟಿಕೆಟ್ ಕುರಿತು ಚರ್ಚೆ ನಡೆದ ಕೇವಲ 24 ಗಂಟೆಗಳಲ್ಲೇ ಸರ್ಕಾರ ಪ್ರತಿ ಶಾಸಕರಿಗೆ ಎರಡು ಟಿಕೆಟ್ ಹಾಗೂ ಮುಂದಿನ ದಿನಗಳಲ್ಲಿ ನಾಲ್ಲು ಟಿಕೆಟ್ ನೀಡಲು ಮುಂದಾಗಿರುವುದು ಸುರೇಶ್ ಕುಮಾರ್ ಅವರ ಅಚ್ಚರಿಗೆ ಕಾರಣವಾಗಿದೆ. “ಜನಸಾಮಾನ್ಯರ ಅದೆಷ್ಟೋ ಜ್ವಲಂತ ಸಮಸ್ಯೆಗಳ ಬಗ್ಗೆ ನಾವು ಕೇಳುವ ಪ್ರಶ್ನೆಗಳಿಗೆ ವರ್ಷಾನುಗಟ್ಟಲೆ ಉತ್ತರವೋ ಅಥವಾ ಪರಿಹಾರವೋ ಸಿಗುವುದಿಲ್ಲ. ಆದರೆ ಶಾಸಕರ ಸೌಲಭ್ಯದ ವಿಷಯ ಬಂದಾಗ ಸರ್ಕಾರ ಇಷ್ಟು ವೇಗವಾಗಿ ಸ್ಪಂದಿಸಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜಕಾರಣಿಗಳ ಬಗ್ಗೆ ಕೀಳುರಿಮೆ:

ಇಂತಹ ವಿಐಪಿ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ರಾಜಕಾರಣಿಗಳಾದ ನಮ್ಮ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಗೌರವವನ್ನು ಕಡಿಮೆ ಮಾಡುತ್ತದೆ. ಈ ಸವಲತ್ತುಗಳು ನಮ್ಮನ್ನು ಜನರ ದೃಷ್ಟಿಯಲ್ಲಿ ಕನಿಷ್ಠರನ್ನಾಗಿ ಮಾಡುತ್ತವೆ ಎಂಬ ಅರಿವು ನಮಗಿರಬೇಕು ಎಂದು ಅವರು ಎಚ್ಚರಿಸಿದ್ದಾರೆ.

ಸವಿನಯ ನಿರಾಕರಣೆ:

“ಸ್ಪಷ್ಟ ಮಾತುಗಳಲ್ಲಿ ಹೇಳುವುದಾದರೆ, ನನಗೆ ಆ ಟಿಕೆಟ್‌ಗಳು ಖಂಡಿತ ಬೇಡ. ವಿಐಪಿ ಸಂಸ್ಕೃತಿಯ ಈ ಭಾಗವಾಗಲು ನಾನು ಇಷ್ಟಪಡುವುದಿಲ್ಲ,” ಎಂದು ಹೇಳುವ ಮೂಲಕ ಸುರೇಶ್ ಕುಮಾರ್ ಅವರು ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗುವ ನಿಲುವು ತಳೆದಿದ್ದಾರೆ. ಸರ್ಕಾರದ ಈ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಸುರೇಶ್ ಕುಮಾರ್ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 


Share this with Friends

Related Post