Fri. Jun 5th, 2026

ಅಸ್ಸಾಂನಲ್ಲಿ ಆಡಳಿತ ವಿರೋಧಿ ಅಲೆ: ಬದಲಾವಣೆ ಖಚಿತ ಎಂದ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: ಅಸ್ಸಾಂ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಮುಂಬರುವ ದಿನಗಳಲ್ಲಿ ಅಲ್ಲಿ ದೊಡ್ಡ ಮಟ್ಟದ ರಾಜಕೀಯ ಬದಲಾವಣೆ ಗಾಳಿ ಬೀಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.

ಶನಿವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸ್ಸಾಂ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಅಲ್ಲಿನ ಸದ್ಯದ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. “ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ನೀಡಿದ್ದ ಭರವಸೆಗಳು ಕೇವಲ ಕಾಗದದ ಮೇಲಿವೆ. ಕಳೆದ ಹತ್ತು ವರ್ಷಗಳಲ್ಲಿ ಜನಸಾಮಾನ್ಯರ ಪ್ರಗತಿಯಾಗಿಲ್ಲ, ಬದಲಾಗಿ ಭ್ರಷ್ಟಾಚಾರದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ,” ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಆಂತರಿಕ ಕಲಹ:

ಅಸ್ಸಾಂ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮಾರ್ಮಿಕವಾಗಿ ನುಡಿದ ಡಿ.ಕೆ.ಎಸ್, “ಇತ್ತೀಚಿನ ಸಚಿವ ಸಂಪುಟ ಪುನಾರಚನೆ ಬಳಿಕ ಅಲ್ಲಿನ ಆಡಳಿತ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸ್ವತಃ ಬಿಜೆಪಿ ನಾಯಕರೇ ಅತೃಪ್ತರಾಗಿದ್ದು, ಅಲ್ಲಿನ ಆಡಳಿತ ಯಂತ್ರ ಕುಸಿದಿದೆ. ಹೀಗಾಗಿ ಅಲ್ಲಿನ ಜನತೆ ಈ ಬಾರಿ ಖಂಡಿತವಾಗಿಯೂ ಬದಲಾವಣೆ ಬಯಸಿದ್ದಾರೆ,” ಎಂದರು.

ಇದೇ ವೇಳೆ ತಮ್ಮ ಪ್ರವಾಸದ ಬಗ್ಗೆ ಮಾಹಿತಿ ನೀಡಿದ ಅವರು, ಅಸ್ಸಾಂ ಪ್ರಚಾರದ ನಂತರ ಕೇರಳಕ್ಕೂ ಭೇಟಿ ನೀಡಲಿದ್ದು, ಅದರೊಂದಿಗೆ ಕರ್ನಾಟಕದ ಉಪಚುನಾವಣೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು.


Share this with Friends

Related Post