ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಅವರಿಗೆ ಅಸಮಾಧಾನವಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಕಾಂಗ್ರೆಸ್ ಪಕ್ಷವು ಸಿದ್ಧಾಂತ ಮತ್ತು ಕಾರ್ಯಕರ್ತರ ಮೇಲೆ ನಡೆಯುತ್ತದೆಯೇ ಹೊರತು, ಕೇವಲ ವ್ಯಕ್ತಿಗಳ ಮೇಲಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಅವರು ಚುನಾವಣಾ ಪ್ರಚಾರಕ್ಕೆ ಬಾರದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. “ಪಕ್ಷವು ಜಮೀರ್ ಅವರಿಗೆ ಕೇರಳ ಚುನಾವಣಾ ಪ್ರಚಾರದ ಉಸ್ತುವಾರಿ ನೀಡಿದೆ. ಅವರು ಆ ಜವಾಬ್ದಾರಿಯನ್ನು ಮುಗಿಸಿಕೊಂಡು ಬರುತ್ತಾರೆ. ಅವರೊಬ್ಬರೇ ಅಲ್ಲ, ಇತರ ಅಲ್ಪಸಂಖ್ಯಾತ ನಾಯಕರಿಗೂ ಚುನಾವಣಾ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ” ಎಂದರು.
ಯಾರೂ ಅನಿವಾರ್ಯವಲ್ಲ:
ಪಕ್ಷದ ಒಳಗಿನ ಅಸಮಾಧಾನದ ಕುರಿತ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಡಿಸಿಎಂ, “ಪಕ್ಷವು ಡಿ.ಕೆ. ಶಿವಕುಮಾರ್ ಮೇಲಾಗಲಿ, ಸಿದ್ದರಾಮಯ್ಯ ಅಥವಾ ಜಮೀರ್ ಅವರ ಮೇಲಾಗಲಿ ನಡೆಯುತ್ತಿಲ್ಲ. ಕಾಂಗ್ರೆಸ್‌ಗೆ ತನ್ನದೇ ಆದ ಸಿದ್ಧಾಂತವಿದೆ. ಈ ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು” ಎಂದು ತಿಳಿಸಿದರು.
ಅಲ್ಪಸಂಖ್ಯಾತರ ರಕ್ಷಣೆ ನಮ್ಮ ಕರ್ತವ್ಯ:
ಇದೇ ವೇಳೆ ಅಲ್ಪಸಂಖ್ಯಾತರ ಓಲೈಕೆ ಎಂಬ ಬಿಜೆಪಿ ಟೀಕೆಗೆ ಉತ್ತರಿಸಿದ ಅವರು, “ಅಲ್ಪಸಂಖ್ಯಾತರನ್ನು ರಕ್ಷಿಸುವುದು ಮತ್ತು ಅವರಿಗೆ ಅಧಿಕಾರ ನೀಡುವುದು ನಮ್ಮ ಬದ್ಧತೆ. ಈ ನಿಟ್ಟಿನಲ್ಲಿ ಜಬ್ಬಾರ್ ಅವರಿಗೆ ಪರಿಷತ್ ಸ್ಥಾನ ಹಾಗೂ ಶಿಗ್ಗಾಂವ್ ಕ್ಷೇತ್ರದವರಿಗೂ ಸ್ಥಾನ ನೀಡಿದ್ದೇವೆ. ಸುಮಾರು 16 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ಅವರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗಿದೆ” ಎಂದು ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಪಟ್ಟಿ ಮಾಡಿದರು.

