Sat. Jun 6th, 2026

ನಮ್ಮದು ಗಾಂಧೀಜಿಯವರ ತತ್ತ್ವದ ಹಿಂದೂತ್ವ: ಸಿಎಂ ಸಿದ್ದರಾಮಯ್ಯ ಪ್ರತಿಪಾದನೆ

Share this with Friends

ದಾವಣಗೆರೆ: “ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧೀಜಿಯವರ ಆಶಯದಂತೆ ಸರ್ವ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಮತ್ತು ಅಧ್ಯಾತ್ಮವನ್ನು ನಂಬುವ ಪಥದಲ್ಲಿ ಸಾಗುತ್ತಿದೆ. ಆದರೆ ಬಿಜೆಪಿ ನಾಥೂರಾಮ್ ಗೋಡ್ಸೆಯ ವಿಚಾರಧಾರೆಯ ಹಿಂದೂತ್ವವನ್ನು ಅನುಸರಿಸುತ್ತಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂಗವಾಗಿ ನಡೆದ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾವೂ ಹಿಂದೂಗಳೇ:

ತಮ್ಮ ಮೇಲಿನ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಸಿಎಂ, “ನನ್ನ ಹೆಸರಿನಲ್ಲೇ ಶಿವ ಮತ್ತು ರಾಮ ಇಬ್ಬರೂ ಇದ್ದಾರೆ. ನಾನು ಹಿಂದೂ ಅಲ್ವಾ? ನಮ್ಮ ಸಂಪುಟದ ಸಹೋದ್ಯೋಗಿಗಳಾದ ಈಶ್ವರ್ ಖಂಡ್ರೆ, ಎಂ.ಸಿ. ಸುಧಾಕರ್ ಅವರು ಹಿಂದೂಗಳಲ್ಲವೇ? ಬಿಜೆಪಿ ಕೇವಲ ಅಧಿಕಾರಕ್ಕಾಗಿ ಹಿಂದೂತ್ವದ ಹೆಸರನ್ನು ಬಳಸಿಕೊಳ್ಳುತ್ತಿದೆ. ಜನರ ಅಭಿವೃದ್ಧಿಯನ್ನು ಮರೆತು ಹಣ ಲೂಟಿ ಮಾಡುವುದೇ ಅವರ ಗುರಿಯಾಗಿದೆ,” ಎಂದು ಕಿಡಿಕಾರಿದರು.

ಆಡಳಿತ ವೈಫಲ್ಯದ ವಿರುದ್ಧ ವಾಗ್ದಾಳಿ:

ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಆರ್ಥಿಕ ನಿರ್ವಹಣೆಯನ್ನು ಪ್ರಶ್ನಿಸಿದ ಅವರು, “ರೈತರ ಸಾಲ ಮನ್ನಾ ಮಾಡುವಂತೆ ಕೇಳಿದಾಗ ಯಡಿಯೂರಪ್ಪ ಅವರು ಉಡಾಫೆಯಿಂದ ಉತ್ತರಿಸಿದ್ದರು. ಬೊಮ್ಮಾಯಿ ಅವರ ಅವಧಿಯಲ್ಲಿ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಲಾಗಿತ್ತು. ಅದರಲ್ಲಿ 23 ಸಾವಿರ ಕೋಟಿಯನ್ನು ನಮ್ಮ ಸರ್ಕಾರ ಈಗಾಗಲೇ ಪಾವತಿಸಿದೆ,” ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಹಾಗೂ ಅಭಿವೃದ್ಧಿ:

“ನುಡಿದಂತೆ ನಡೆದ ನಮ್ಮ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದೆ. ಆದರೆ ಪ್ರಧಾನಿ ಮೋದಿ ಅವರು ಕಳೆದ 12 ವರ್ಷಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದೆ ಕೇವಲ ಉದ್ಯಮಿಗಳ ಹಿತಾಸಕ್ತಿ ಕಾಯುತ್ತಿದ್ದಾರೆ,” ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಬೆಂಬಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು.

 


Share this with Friends

Related Post