Sat. Jun 6th, 2026

ಸಮಾಜ ಸುಧಾರಣೆಗೆ ಮಾಧ್ಯಮಗಳು ಒತ್ತು ನೀಡಲಿ: ಸಿಎಂ ಸಿದ್ದರಾಮಯ್ಯ ಕರೆ

Share this with Friends

ಬೀದರ್:ಪತ್ರಕರ್ತರು ಕೇವಲ ಮಾಹಿತಿ ನೀಡುವವರಾಗಬಾರದು, ಬದಲಾಗಿ ಸಮಾಜದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೀದರ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಇಂದಿನ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಊಹಾ ಪತ್ರಿಕೋದ್ಯಮದ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿಎಂ, ಇದು ಅತ್ಯಂತ ಅಪಾಯಕಾರಿ ಧೋರಣೆ ಎಂದು ಬಣ್ಣಿಸಿದರು. ಕೇವಲ ಕ್ಷುಲ್ಲಕ ವಿಚಾರಗಳನ್ನು ಅಥವಾ ಗಂಡ-ಹೆಂಡತಿ ಜಗಳದಂತಹ ವೈಯಕ್ತಿಕ ವಿಷಯಗಳನ್ನು ದಿನವಿಡೀ ಪ್ರಸಾರ ಮಾಡುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಇಂತಹ ವರದಿಗಳು ಸಮಾಜದ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾಧ್ಯಮ ಸಂಸ್ಥೆಗಳು ಯೋಚಿಸಬೇಕು. ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಪತ್ರಕರ್ತರಾಗಿದ್ದಾಗ ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.

ಬಸವಾದಿ ಶರಣರು ಪ್ರತಿಪಾದಿಸಿದ ಸಮಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಲು ಮಾಧ್ಯಮಗಳು ಸಹಕರಿಸಬೇಕು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ, ಶೋಷಿತರ ಪರವಾಗಿ ಕೆಲಸ ಮಾಡುವುದು ಪತ್ರಿಕೋದ್ಯಮದ ಮುಖ್ಯ ಉದ್ದೇಶವಾಗಬೇಕು. ಪಟ್ಟಭದ್ರ ಹಿತಾಸಕ್ತಿಗಳು ಅಸಮಾನತೆ ಮುಂದುವರಿಯಲಿ ಎಂದು ಬಯಸುತ್ತವೆ, ಆದರೆ ಯಾವ ದೇವರೂ ಯಾರನ್ನೂ ಅವಿದ್ಯಾವಂತರಾಗಿ ಅಥವಾ ಕೆಳಜಾತಿಯಲ್ಲಿ ಹುಟ್ಟಿ ಎಂದು ಬಯಸುವುದಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕಾರ್ಪೊರೇಟ್ ಸಂಸ್ಥೆಗಳ ಹಿಡಿತಕ್ಕೆ ಮಾಧ್ಯಮಗಳು ಸಿಲುಕುತ್ತಿರುವುದು ಇಂದಿನ ದೊಡ್ಡ ಸವಾಲಾಗಿದೆ. ಪತ್ರಕರ್ತರು ಸತ್ಯವನ್ನೇ ಬರೆದರೂ, ಮಾಲೀಕರ ಒತ್ತಡಕ್ಕೆ ಮಣಿದು ಸಂಪಾದಕರು ಸುದ್ದಿಯನ್ನು ಬದಲಿಸುವ ಸಂದರ್ಭಗಳು ಎದುರಾಗುತ್ತಿವೆ. ನಾನು ರಾಜಕೀಯದಲ್ಲಿ ಸುಮಾರು 40 ವರ್ಷಗಳಿಂದ ಇದ್ದೇನೆ, ಆದರೆ ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಇದುವರೆಗೂ ಯಾರನ್ನೂ ಕೇಳಿಲ್ಲ. ಮಾಧ್ಯಮಗಳ ಮೇಲೆ ಜನಸಾಮಾನ್ಯರು ಮತ್ತು ನಾನು ಇಂದಿಗೂ ನಂಬಿಕೆ ಇಟ್ಟಿದ್ದೇವೆ ಎಂದು ಅವರು ಪ್ರತಿಪಾದಿಸಿದರು.

ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಅವರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಿದ್ದೇ ನಮ್ಮ ಸರ್ಕಾರ ಎಂದು ನೆನಪಿಸಿದರು. ಈ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ತಾಂತ್ರಿಕ ಅಡಚಣೆಗಳಿದ್ದರೆ ಅದನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಬಡವರ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ‘ಯುನಿವರ್ಸಲ್ ಬೇಸಿಕ್ ಇನ್‌ಕಮ್’ ಮಾದರಿಯ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿದೆ, ಈ ಸದುದ್ದೇಶವನ್ನು ಪತ್ರಕರ್ತರು ಜನರಿಗೆ ಸರಿಯಾಗಿ ತಲುಪಿಸಬೇಕು ಎಂದು ಅವರು ಮನವಿ ಮಾಡಿದರು.

 


Share this with Friends

Related Post