Fri. Jun 5th, 2026

ರಾಜ್ಯ ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ: ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ

Share this with Friends

ನಾಗಮಂಗಲ (ಆದಿಚುಂಚನಗಿರಿ): ರಾಜ್ಯದ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದ್ದು, ಆಡಳಿತಾತ್ಮಕವಾಗಿ ಸತ್ತುಹೋಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ಆದಿಚುಂಚನಗಿರಿ ಮಠದ ಗುರು ಭೈರವೈಕ್ಯ ಮಂದಿರ ಉದ್ಘಾಟನೆಯ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಕಾಂಗ್ರೆಸ್ ನಾಯಕರು ಕೇವಲ ಒಳಜಗಳದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು, ಅಧಿಕಾರಕ್ಕಾಗಿ ಕಿತ್ತಾಡುತ್ತಿರುವುದು ದುರದೃಷ್ಟಕರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಶಾಸಕರ ಬೀಡು:

ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹೈಕಮಾಂಡ್ ಓಲೈಕೆಗಾಗಿ ಓಡಾಟ ನಡೆಸುತ್ತಿರುವ ಇವರಿಗೆ ಜನರ ಸಂಕಷ್ಟಗಳು ಕಾಣುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಸ್ವಪಕ್ಷೀಯರಲ್ಲೇ ಅಸಮಾಧಾನ:

ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಕಾಂಗ್ರೆಸ್ ಶಾಸಕರಲ್ಲೇ ಬಂಡಾಯದ ಹೊಗೆ ಆಡುತ್ತಿದೆ. ಸ್ವಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವುದು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಈ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಇಲ್ಲವೇ ಅಧಿಕಾರ ಬಿಟ್ಟು ತೊಲಗಬೇಕು ಎಂದು ಅಶೋಕ್ ಆಗ್ರಹಿಸಿದರು.

2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಫಿಕ್ಸ್; 

2028ರ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.”ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದು ಖಚಿತ. ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ನಿರ್ಧರಿಸಲಿದ್ದಾರೆ. ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಹಲವರಿದ್ದಾರೆ. ಹೈಕಮಾಂಡ್ ಆಶೀರ್ವಾದವಿದ್ದರೆ ನಾನು ಕೂಡ ಸಿಎಂ ಆಗಬಹುದು. ಆದರೆ ಸದ್ಯಕ್ಕೆ ನಮ್ಮ ಮೊದಲ ಗುರಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದಾಗಿದೆ” ಎಂದು ಅಶೋಕ್ ಹೇಳಿದರು.

ಕಾಂಗ್ರೆಸ್ ಈಗ ‘ಜಗಳಗಳ ಪಾರ್ಟಿ’:

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕಾಂಗ್ರೆಸ್ ಸರ್ಕಾರದ ಒಳಜಗಳದಿಂದಾಗಿ ಆಡಳಿತ ಯಂತ್ರ ಕುಸಿದಿದೆ. ಮುಖ್ಯಮಂತ್ರಿ ಬದಲಾವಣೆ ಪ್ರಹಸನ ಈಗ ಬೀದಿಗೆ ಬಂದಿದೆ. ಹಿಂದೆ ಜನತಾದಳವನ್ನು ‘ಜಗಳಗಳ ಪಾರ್ಟಿ’ ಎನ್ನಲಾಗುತ್ತಿತ್ತು, ಈಗ ಆ ಹಣೆಪಟ್ಟಿ ಕಾಂಗ್ರೆಸ್‌ಗೆ ಅನ್ವಯಿಸುತ್ತದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾತಿಗೆ ಸ್ವಪಕ್ಷದ ಶಾಸಕರೇ ಬೆಲೆ ನೀಡುತ್ತಿಲ್ಲ. ಸಚಿವರು ಮತ್ತು ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ” ಎಂದು ವ್ಯಂಗ್ಯವಾಡಿದರು.

ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಲೋಕಾರ್ಪಣೆ: 

ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಗುರು ಭೈರವೈಕ್ಯ ಮಂದಿರ’ದ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ ಎಂದು ಆರ್. ಅಶೋಕ್ ಅವರು ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆದಿಚುಂಚನಗಿರಿ ಮಠದ ಮೇಲೆ ಅಪಾರವಾದ ಭಕ್ತಿ ಮತ್ತು ಗೌರವವಿದೆ. ಈ ಹಿಂದೆಯೂ ಅವರು ಮಠದ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈಗ ಭೈರವೈಕ್ಯ ಮಂದಿರದ ಉದ್ಘಾಟನೆಗೆ ಅವರು ಆಗಮಿಸುತ್ತಿರುವುದು ಮಠದ ಭಕ್ತರಲ್ಲಿ ವಿಶೇಷ ಸಂಭ್ರಮ ಮೂಡಿಸಿದೆ ಎಂದು ತಿಳಿಸಿದರು.

ಆಕರ್ಷಕ ಮಂದಿರ ಮತ್ತು ಪೂಜಾ ವಿಧಿವಿಧಾನ:

ನೂತನವಾಗಿ ನಿರ್ಮಿಸಲಾಗಿರುವ ಮಂದಿರವು ಅತ್ಯಂತ ಆಕರ್ಷಕ ವಿನ್ಯಾಸದಿಂದ ಕೂಡಿದೆ. ಉದ್ಘಾಟನೆಯ ದಿನದಂದು ಪ್ರಧಾನಿಗಳು ಮೊದಲಿಗೆ ಭೈರವೈಕ್ಯ ದೇವರ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮಂದಿರವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿ, ಮಠದ ಆವರಣದಲ್ಲಿ ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.

ಬೃಹತ್ ಸಿದ್ಧತೆ ಮತ್ತು ವ್ಯವಸ್ಥೆ:

ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗುವ ನಿರೀಕ್ಷೆಯಿದ್ದು, ಎಲ್ಲರಿಗೂ ಸುಗಮವಾಗಿ ಕುಳಿತುಕೊಳ್ಳಲು ಬೇಕಾದ ಬೃಹತ್ ಪೆಂಡಾಲ್ ಹಾಗೂ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. “ಈ ಮಹತ್ವದ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೂ ಅವಕಾಶ ದೊರೆತಿರುವುದು ಸಂತಸ ತಂದಿದೆ” ಎಂದು ಅಶೋಕ್ ಇದೇ ಸಂದರ್ಭದಲ್ಲಿ ಹಂಚಿಕೊಂಡರು.


Share this with Friends

Related Post