ಬೀದರ್: ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಬೀದರ್ ನಾಗರಿಕ ವಿಮಾನಯಾನ ಸೇವೆಯನ್ನು ಶೀಘ್ರದಲ್ಲೇ ಪುನರಾರಂಭಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸ್ಥಗಿತಗೊಂಡಾಗ, ರಾಜ್ಯ ಸರ್ಕಾರವು ಕೆಕೆಆರ್‌ಡಿಬಿ (KKRDB) ಮೂಲಕ 13 ಕೋಟಿ ರೂ. ಅನುದಾನ ನೀಡಿ ಸೇವೆಯನ್ನು ಮುಂದುವರಿಸಿತ್ತು. 2025ರ ಏಪ್ರಿಲ್‌ನಿಂದ ಒಂದು ವರ್ಷದ ಅವಧಿಗೆ ಮಾಡಿಕೊಳ್ಳಲಾಗಿದ್ದ ಈ ಒಪ್ಪಂದವು ಏಪ್ರಿಲ್ 14ಕ್ಕೆ ಮುಕ್ತಾಯಗೊಂಡಿದೆ” ಎಂದು ಸ್ಪಷ್ಟಪಡಿಸಿದರು.
ಹೆಚ್ಚುವರಿ ಅನುದಾನಕ್ಕೆ ಬೇಡಿಕೆ:
ಪ್ರಸ್ತುತ ವಿಮಾನಯಾನ ಸಂಸ್ಥೆಯು ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಬೀದರ್ ಜನರ ಹಿತದೃಷ್ಟಿಯಿಂದ ವಿಮಾನ ಸಂಚಾರ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಟೀಕೆಗಳಿಗೆ ಪ್ರತ್ಯುತ್ತರ:
ಇದೇ ವೇಳೆ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಸಚಿವರು, “ಅನಾವಶ್ಯಕ ರಾಜಕೀಯ ಟೀಕೆಗಳನ್ನು ನಿಲ್ಲಿಸಬೇಕು. ಉಡಾನ್ ಯೋಜನೆಯ ಸಬ್ಸಿಡಿಯೂ ಜನರ ತೆರಿಗೆ ಹಣವೇ ಆಗಿದೆ. ಕೆಕೆಆರ್‌ಡಿಬಿ ಹಣವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಏಳಿಗೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ” ಎಂದು ತಿಳಿಸಿದ್ದಾರೆ.

