Sat. Jun 6th, 2026

ದಾವಣಗೆರೆ ಗೆಲ್ಲಿಸದಿದ್ದರೆ ರಾಜೀನಾಮೆ ನೀಡಲು ಸಿದ್ಧನಿದ್ದೆ: ಟಿಕೆಟ್ ಹಂಚಿಕೆ ಕುರಿತು ಸಚಿವ ಜಮೀರ್ ಸ್ಫೋಟಕ ಹೇಳಿಕೆ

Share this with Friends

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಹಠ ಹಿಡಿದಿದ್ದೆ, ” ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ನಾನು ಪಕ್ಷದ ವರಿಷ್ಠರಲ್ಲಿ ಮುಕ್ತವಾಗಿ ಕೇಳಿದ್ದೆ. ಅಷ್ಟೇ ಅಲ್ಲ, ಒಂದು ವೇಳೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅವರು ಗೆಲ್ಲದಿದ್ದರೆ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕೂಡ ಸವಾಲು ಹಾಕಿದ್ದೆ,” ಎಂದು ಜಮೀರ್ ಅಹಮದ್ ಬಹಿರಂಗಪಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ವಿಚಾರದಲ್ಲಿ ತಾವು ಯಾವುದೇ ಗುಪ್ತ ಸಭೆ ನಡೆಸಿಲ್ಲ. “ಸಮುದಾಯದ ಏಳು ಮಂದಿ ಸಮರ್ಥ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ನೀಡಿದ್ದೆವು. ಸಮುದಾಯದ ಹಿತದೃಷ್ಟಿಯಿಂದ ಈ ಬೇಡಿಕೆಯಿಟ್ಟಿದ್ದೆವು. ಆದರೆ ಅಂತಿಮವಾಗಿ ಹೈಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾದೆವು,” ಎಂದು ಹೇಳಿದರು.

ಪಕ್ಷದ ಶಿಸ್ತೇ ಮೊದಲು:

“ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಇಬ್ಬರೂ ಪಕ್ಷದ ನಿಷ್ಠಾವಂತ ನಾಯಕರು. ಆದರೆ, ದಾವಣಗೆರೆ ಉಪಚುನಾವಣೆಯ ಪ್ರಚಾರದ ವೇಳೆ ಉಂಟಾದ ಕೆಲವು ಭಿನ್ನಾಭಿಪ್ರಾಯಗಳು ಮತ್ತು ಪಕ್ಷದ ಸೂಚನೆಯನ್ನು ಪಾಲಿಸುವಲ್ಲಿ ಆದ ವಿಳಂಬದ ಬಗ್ಗೆ ಹೈಕಮಾಂಡ್ ಅಸಮಾಧಾನಗೊಂಡಿರಬಹುದು. ಹೀಗಾಗಿ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಥವಾ ಶಿಸ್ತು ಕ್ರಮದ ಭಾಗವಾಗಿ ಈ ಬದಲಾವಣೆ ತರಲಾಗಿದೆ,” ಎಂದು ಜಮೀರ್ ವಿವರಿಸಿದರು.

ಮುಂದಿನ ನಡೆ ಏನು?

ಈ ಇಬ್ಬರು ನಾಯಕರ ಪದಚ್ಯುತಿ ಅಥವಾ ರಾಜೀನಾಮೆಯಿಂದ ಮುಸ್ಲಿಂ ಸಮುದಾಯದಲ್ಲಿ ಉಂಟಾಗಬಹುದಾದ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗಲೇಬೇಕು. ಈ ಕುರಿತು ನಾನು ಮತ್ತು ಇತರ ಮುಸ್ಲಿಂ ಮುಖಂಡರು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ. ಸಮುದಾಯಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ,” ಎಂದು ಭರವಸೆ ನೀಡಿದರು

ಮಲ್ಲಿಕಾರ್ಜುನ್ ನಡೆಗೆ ಜಬ್ಬಾರ್ ಅಸಮಾಧಾನ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಡೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. “ಪ್ರಚಾರದ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಅವರು ಅಬ್ದುಲ್ ಜಬ್ಬಾರ್ ಅವರ ಮನೆಗೆ ಭೇಟಿ ನೀಡದೆ, ಅವರ ಪಕ್ಕದ ಮನೆಗೆ ಹೋಗಿ ಬಂದಿದ್ದಾರೆ. ಇದು ಸಹಜವಾಗಿಯೇ ಜಬ್ಬಾರ್ ಅವರಿಗೆ ನೋವುಂಟು ಮಾಡಿದೆ. ಇದೇ ಕಾರಣಕ್ಕೆ ಅವರು ಪ್ರಚಾರ ಕಾರ್ಯದಿಂದ ದೂರ ಉಳಿದರು,” ಎಂದು ಜಮೀರ್ ಸ್ಪಷ್ಟಪಡಿಸಿದರು.

ಇದೇ ವೇಳೆ, ತಮ್ಮ ವಿರುದ್ಧ ಕೇಳಿಬರುತ್ತಿರುವ ಪಕ್ಷ ವಿರೋಧಿ ಚಟುವಟಿಕೆಯ ಆರೋಪಗಳನ್ನು ಜಮೀರ್ ತಳ್ಳಿಹಾಕಿದರು. “ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹೈಕಮಾಂಡ್ ಸೂಚನೆಯಂತೆ ಕೇರಳದಲ್ಲಿ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅನಗತ್ಯ ವದಂತಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ,” ಎಂದರು.

ಜನಸೇವೆಯೇ ಪರಮೋಚ್ಚ:

“ಜನರ ಕಷ್ಟಗಳಿಗೆ ಸ್ಪಂದಿಸುವುದು ಮತ್ತು ಅವರ ನಡುವೆ ಇರುವುದೇ ನನಗೆ ಇಷ್ಟ. ಅಧಿಕಾರಕ್ಕಾಗಿ ನಾನು ಎಂದು ಹಪಹಪಿಸಿಲ್ಲ. ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ,” ಎಂದು ಜಮೀರ್ ತಿಳಿಸಿದರು. ಇದೇ ವೇಳೆ, ಸಚಿವ ಸಂಪುಟ ಪುನಾರಚನೆಯ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.

ಜೆಡಿಎಸ್ ಸೇರಲ್ಲ:

ಜೆಡಿಎಸ್ ಸೇರ್ಪಡೆ ವದಂತಿಗಳ ಕುರಿತು ಕೇಳಿದ ಪ್ರಶ್ನೆಗೆ, ಅಂತಹ ಯಾವುದೇ ಆಲೋಚನೆ ತಮ್ಮ ಮುಂದಿಲ್ಲ ಎಂದು ಅವರು ಮಾರ್ಮಿಕವಾಗಿ ಉತ್ತರಿಸಿದರು.

 


Share this with Friends

Related Post