ಬೆಂಗಳೂರು: ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ (EV) ಮೇಲೆ ವಿಧಿಸಿರುವ ಜೀವಿತಾವಧಿ ತೆರಿಗೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಈ ನಿರ್ಧಾರವು ಪರಿಸರ ಸ್ನೇಹಿ ಸಂಚಾರಕ್ಕೆ ಮಾರಕವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಸದರು ತಮ್ಮ ಪತ್ರದಲ್ಲಿ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, “ಸ್ವಚ್ಛ ಇಂಧನ ಬಳಕೆಯನ್ನು ಉತ್ತೇಜಿಸುವ ಬದಲು ಕರ್ನಾಟಕ ಸರ್ಕಾರವು ತೆರಿಗೆ ಹೇರುವ ಮೂಲಕ ಹಿಮ್ಮುಖ ಹೆಜ್ಜೆ ಇಡುತ್ತಿದೆ” ಎಂದು ಟೀಕಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ‘ನೆಟ್-ಝೀರೋ’ ಗುರಿ ತಲುಪಲು ಶ್ರಮಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಇವಿಗಳ ಮೇಲೆ ತೆರಿಗೆ ವಿಧಿಸುತ್ತಿರುವುದು ರಾಷ್ಟ್ರೀಯ ಆದ್ಯತೆಗಳಿಗೆ ವಿರುದ್ಧವಾಗಿದೆ,” ಎಂದು ಅವರು ಉಲ್ಲೇಖಿಸಿದ್ದಾರೆ.
ಹಣಕಾಸಿನ ಹೊರೆ: ರಾಜ್ಯದ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಮತ್ತು ಸುಮಾರು ₹250 ಕೋಟಿ ಸಂಪನ್ಮೂಲ ಕ್ರೋಢೀಕರಿಸಲು ಜನಸಾಮಾನ್ಯರ ಮೇಲೆ ಈ ತೆರಿಗೆಯ ಭಾರ ಹಾಕಲಾಗುತ್ತಿದೆ ಎಂದು ಸೂರ್ಯ ಆರೋಪಿಸಿದ್ದಾರೆ.
ಇತರ ರಾಜ್ಯಗಳ ಮಾದರಿ: ದೆಹಲಿಯಂತಹ ರಾಜ್ಯಗಳು ₹30 ಲಕ್ಷದೊಳಗಿನ ಇವಿ ಕಾರುಗಳಿಗೆ 100% ರಸ್ತೆ ತೆರಿಗೆ ವಿನಾಯಿತಿ ನೀಡುತ್ತಿವೆ. ಆದರೆ ಕರ್ನಾಟಕ ಸರ್ಕಾರವು ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ ಎಂದು ಅವರು ದೂರಿದ್ದಾರೆ.
ಏನಿದು ಹೊಸ ತೆರಿಗೆ?
ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯ್ದೆಯನ್ವಯ, ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ₹10 ಲಕ್ಷದವರೆಗಿನ ಇವಿ ಕಾರುಗಳಿಗೆ 5% ಮತ್ತು ₹10 ರಿಂದ ₹25 ಲಕ್ಷದವರೆಗಿನ ವಾಹನಗಳಿಗೆ 8% ಜೀವಿತಾವಧಿ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಹೊಸ ನಿಯಮದಿಂದಾಗಿ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ.
ಈ ತೆರಿಗೆಯನ್ನು ಹಿಂಪಡೆಯುವ ಮೂಲಕ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

