ಬೆಂಗಳೂರು: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಮಿತಿಮೀರಿದ್ದು, ಭ್ರಷ್ಟಾಚಾರದ ಕೂಪವಾಗಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿರುದ್ಧ ಹಾಗೂ ಸರ್ಕಾರದ ವಿಫಲತೆಯ ವಿರುದ್ಧ ಯುವಜನತೆ ಸಂಘಟಿತರಾಗಿ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕರೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸರ್ಕಾರದ ಆಡಳಿತಾವಧಿಯಲ್ಲಿ ಒಂದೇ ಒಂದು ಪಾರದರ್ಶಕ ನೇಮಕಾತಿ ನಡೆದಿಲ್ಲ. ಕೆಪಿಎಸ್‌ಸಿ ಅಕ್ರಮಗಳಲ್ಲಿ ಮುಳುಗಿದ್ದರೂ ಮುಖ್ಯಮಂತ್ರಿಗಳು ಅದನ್ನು ಸರಿಪಡಿಸುವ ಭರವಸೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ. ವ್ಯವಸ್ಥೆ ಸಂಪೂರ್ಣವಾಗಿ ಕೊಳೆತು ನಾರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಕೇಸ್‌ಗಳಿಗೆ ಹೆದರಬೇಡಿ:
“ನ್ಯಾಯಕ್ಕಾಗಿ ಹೋರಾಟ ಮಾಡುವಾಗ ದಾಖಲಾಗುವ ಪೊಲೀಸ್ ಪ್ರಕರಣಗಳಿಗೆ ಯುವಕರು ಆತಂಕಪಡುವ ಅಗತ್ಯವಿಲ್ಲ. ಅಂತಹ ಕೇಸ್‌ಗಳನ್ನು ಕಿತ್ತೆಸೆಯುವ ಜವಾಬ್ದಾರಿ ನಮ್ಮದು. ನಿಮ್ಮ ಹಕ್ಕುಗಳಿಗಾಗಿ ಧೈರ್ಯದಿಂದ ಮುನ್ನುಗ್ಗಿ,” ಎಂದು ಅವರು ಯುವಜನರಲ್ಲಿ ವಿಶ್ವಾಸ ತುಂಬಿದರು. ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಈ ಪ್ರತಿಭಟನೆಯ ಕಿಚ್ಚು ಹಬ್ಬಬೇಕು ಎಂದು ಅವರು ಆಶಿಸಿದರು.
ರಾಜಕೀಯಕ್ಕಾಗಿ ಈ ಮಾತನ್ನೇ ಹೇಳುತ್ತಿಲ್ಲ:
“ನಾನು ಕೇವಲ ರಾಜಕೀಯ ಲಾಭಕ್ಕಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಪ್ರತಿಭಾವಂತ ಯುವಕರು ಕೆಲಸವಿಲ್ಲದೆ ಅನುಭವಿಸುತ್ತಿರುವ ಯಾತನೆಯನ್ನು ಕಂಡು ಮನನೊಂದು ಈ ಕರೆ ನೀಡುತ್ತಿದ್ದೇನೆ. 60 ರಿಂದ 70 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನಂಬಿಸಿ ಯುವಜನರಿಗೆ ದ್ರೋಹ ಎಸಗಲಾಗುತ್ತಿದೆ. 2011ರ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿದ್ದ ಸಿದ್ದರಾಮಯ್ಯನವರ ಧೋರಣೆ ಇಂದಿಗೂ ಮುಂದುವರಿದಿದೆ,” ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.
ತಪ್ಪಿತಸ್ಥರನ್ನು ರಕ್ಷಿಸಿ, ಪ್ರಾಮಾಣಿಕರನ್ನು ಗುರಿಯಾಗಿಸುವ ಈ ‘ಕೆಟ್ಟ ಸರ್ಕಾರ’ವನ್ನು ಕಿತ್ತೊಗೆಯದ ಹೊರತು ನಿರುದ್ಯೋಗಿಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
ವಾರಕ್ಕೆರಡು ದಿನ ರಾಜ್ಯದಲ್ಲೇ ವಾಸ್ತವ್ಯ:
ರಾಜ್ಯ ಸರ್ಕಾರದ ವಿಫಲ ನೀತಿಗಳ ವಿರುದ್ಧ ದನಿ ಎತ್ತಲು ಹಾಗೂ ಪಕ್ಷವನ್ನು ಬಲಪಡಿಸಲು ಇನ್ನು ಮುಂದೆ ವಾರದಲ್ಲಿ ಎರಡು ದಿನಗಳ ಕಾಲ ಕರ್ನಾಟಕದಲ್ಲೇ ಇರುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.”ಈ ಸರ್ಕಾರದಿಂದ ಜನರಿಗೆ ಯಾವುದೇ ಒಳ್ಳೆಯದಾಗುತ್ತಿಲ್ಲ. ಜನರ ಪರವಾಗಿ ದನಿ ಎತ್ತಲು ನಾನು ನಿರ್ಧರಿಸಿದ್ದೇನೆ. ದೆಹಲಿಯ ಜವಾಬ್ದಾರಿಯ ನಡುವೆಯೂ ಪ್ರತಿ ವಾರ ಎರಡು ದಿನ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮತ್ತು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಹೋರಾಟಗಳಲ್ಲಿ ಭಾಗಿಯಾಗುತ್ತೇನೆ,” ಎಂದರು.
ಮಹಿಳಾ ಮೀಸಲಾತಿಯಿಂದ ರಾಜಕೀಯ ಬದಲಾವಣೆ:
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಜಾರಿಯಾಗುತ್ತಿರುವ 33% ಮಹಿಳಾ ಮೀಸಲಾತಿಯು ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. “ಕ್ಷೇತ್ರ ಮರು ವಿಂಗಡಣೆಯ ನಂತರ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಮಹಿಳೆಯರಿಗೆ ಸಿಗಲಿರುವ ಮೀಸಲಾತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪಕ್ಷದಲ್ಲಿ ಮಹಿಳಾ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಉತ್ತೇಜನ ನೀಡಲಿದ್ದೇವೆ,” ಎಂದು ಅವರು ತಿಳಿಸಿದರು.

