Sat. Jun 6th, 2026

ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಒಂಬತ್ತು ಸಂಕಲ್ಪಗಳನ್ನು ಕೈಗೊಳ್ಳಿ: ಮಂಡ್ಯದಲ್ಲಿ ಪ್ರಧಾನಿ ಮೋದಿ ಕರೆ

Share this with Friends

ಮಂಡ್ಯ: ಪ್ರತಿಯೊಬ್ಬ ನಾಗರಿಕನು ಜಲ ಸಂರಕ್ಷಣೆ, ನೈಸರ್ಗಿಕ ಕೃಷಿ ಮತ್ತು ಫಿಟ್‌ನೆಸ್ ಸೇರಿದಂತೆ ಒಂಬತ್ತು ಪ್ರಮುಖ ಸಾಮೂಹಿಕ ಪ್ರತಿಜ್ಞೆಗಳನ್ನು ಸ್ವೀಕರಿಸುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ಬುಧವಾರ ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ವಿಕಸಿತ ಭಾರತದ ನಿರ್ಮಾಣಕ್ಕಾಗಿ ಒಂಬತ್ತು ಸೂತ್ರಗಳನ್ನು ಜನರ ಮುಂದಿಟ್ಟರು.

ಪ್ರಧಾನಿಯವರ 9 ಪ್ರಮುಖ ಕರೆಗಳು:

ಜಲ ಸಂರಕ್ಷಣೆ: ನೀರನ್ನು ಉಳಿಸಿ, ಸಮರ್ಪಕ ನಿರ್ವಹಣೆ ಮಾಡಿ.

ಸಸಿ ನೆಡುವುದು: ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ತಾಯಿಯ ನೆನಪಿಗಾಗಿ ಒಂದು ಸಸಿ ನೆಡಿ.

ಸ್ವಚ್ಛತೆ: ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಶುಚಿಯಾಗಿಡಿ.

ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ: ‘ಲೋಕಲ್’ ವಸ್ತುಗಳ ಖರೀದಿಗೆ ಆದ್ಯತೆ ನೀಡಿ.

ದೇಶೀಯ ಪ್ರವಾಸೋದ್ಯಮ: ವಿದೇಶಕ್ಕೆ ಹೋಗುವ ಮುನ್ನ ನಮ್ಮ ದೇಶದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ.

ನೈಸರ್ಗಿಕ ಕೃಷಿ: ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಿ.

ಸಿರಿಧಾನ್ಯ ಬಳಕೆ: ಆರೋಗ್ಯಕ್ಕಾಗಿ ರಾಗಿ ಸೇರಿದಂತೆ ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸಿ.

ತೈಲ ಉಳಿತಾಯ: ಇಂಧನ ಬಳಕೆಯನ್ನು ಮಿತಿಗೊಳಿಸಿ.

ಫಿಟ್‍ನೆಸ್ ಮತ್ತು ಸೇವೆ: ಯೋಗ, ವ್ಯಾಯಾಮದ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಿ.

“ಈ ಒಂಬತ್ತು ನಿರ್ಣಯಗಳನ್ನು ಪ್ರಾಮಾಣಿಕವಾಗಿ ಪಾಲಿಸಿದರೆ, ಅಭಿವೃದ್ಧಿ ಹೊಂದಿದ ಕರ್ನಾಟಕ ಮತ್ತು ಸದೃಢ ಭಾರತದ ಗುರಿಯನ್ನು ನಾವು ಶೀಘ್ರವಾಗಿ ತಲುಪಬಹುದು” ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಜನಸಾಮಾನ್ಯರ ನೋವಿಗೆ ಸ್ಪಂದಿಸಿದ ಮಹಾನ್ ಸಂತ: “ನಿಮ್ಮೆಲ್ಲರ ನಡುವೆ ಬರುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿ, ಸಮಾಜವನ್ನು ಸಂಕಷ್ಟದಿಂದ ಮೇಲೆತ್ತಿದ ಮಹಾನ್ ಪರಂಪರೆ ಈ ಮಠಕ್ಕಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದರು.

ಒಕ್ಕಲಿಗ ಸಮುದಾಯದ ಆರಾಧ್ಯ ದೈವದಂತಿದ್ದ 71ನೇ ಮಠಾಧೀಶರಾದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಕೊಡುಗೆಯನ್ನು ಸ್ಮರಿಸಿದರು. “ಶ್ರೀಗಳು ಕೇವಲ ಮಠಕ್ಕೆ ಸೀಮಿತವಾಗದೆ, ಜನಸಾಮಾನ್ಯರ ನಡುವೆ ಇದ್ದು ಅವರ ಬದುಕನ್ನು ಹಸನುಗೊಳಿಸಿದವರು. ಅವರಿಗೆ ಸಮರ್ಪಿತವಾದ ಈ ಮಂದಿರವು ಸಮಾಜಕ್ಕೆ ಸದಾ ಪ್ರೇರಣೆಯಾಗಲಿದೆ,” ಎಂದರು.

ಪುಸ್ತಕ ಬಿಡುಗಡೆ ಹಾಗೂ ದರ್ಶನ:

ಇದೇ ಸಂದರ್ಭದಲ್ಲಿ ಪ್ರಧಾನಿಯವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಜೊತೆಗೂಡಿ ‘ಸೌಂದರ್ಯ ಲಹರಿ ಮತ್ತು ಶಿವ ಮಹಿಮಾ ಸ್ತೋತ್ರಂ’ ಎಂಬ ವಿಶೇಷ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಮಂದಿರದ ಉದ್ಘಾಟನೆಗೂ ಮುನ್ನ ಐತಿಹಾಸಿಕ ಜ್ವಾಲಾ ಪೀಠಕ್ಕೆ ಭೇಟಿ ನೀಡಿದ ಮೋದಿ, ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಆಧ್ಯಾತ್ಮಿಕ ಅನುಭೂತಿ:

ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಲ ಭೈರವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿಗಳು, ಐತಿಹಾಸಿಕ ಜ್ವಾಲಾ ಪೀಠದಲ್ಲಿ ಸಮಯ ಕಳೆದರು. “ಇಂದಿನ ಅನುಭವಗಳನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಮಹಾನ್ ಸಂತರ ಸಾನ್ನಿಧ್ಯ ಮತ್ತು ಮಂಡ್ಯದ ಜನರ ಪ್ರೀತಿ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ” ಎಂದು ಅವರು ಭಾವುಕರಾಗಿ ನುಡಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಲ್ಲೋಟ್, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮಿಗಳು, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಪ್ರಮುಖ ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.

 


Share this with Friends

Related Post