ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನ ಭವಿಷ್ಯದ ನೀರಿನ ದಾಹವನ್ನು ನೀಗಿಸಲು ರಾಜ್ಯ ಸರ್ಕಾರ ಮತ್ತು ಬೆಂಗಳೂರು ಜಲಮಂಡಳಿ (BWSSB) ಮಹತ್ವದ ಹೆಜ್ಜೆ ಇಟ್ಟಿವೆ. ಕಾವೇರಿ ನೀರು ಪೂರೈಕೆ ಯೋಜನೆಯ 6ನೇ ಹಂತದ (CWSS Stage-VI) ಕಾರ್ಯಸಾಧ್ಯತೆ ಮತ್ತು ಪೂರ್ವಸಿದ್ಧತಾ ಸಮೀಕ್ಷೆಯ ಆರಂಭಿಕ ಸಭೆಯು ಜಲಮಂಡಳಿಯ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಈ ಬೃಹತ್ ಯೋಜನೆಯನ್ನು ರೂಪಿಸಲಾಗುತ್ತಿದೆ. ಬೆಂಗಳೂರು ನಗರವು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಜನಸಂಖ್ಯೆಯೂ ವೇಗವಾಗಿ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ 25-30 ವರ್ಷಗಳ ಕಾಲ ನಗರಕ್ಕೆ ನೀರಿನ ಕೊರತೆಯಾಗದಂತೆ ದೀರ್ಘಕಾಲದ ಮೂಲಸೌಕರ್ಯವನ್ನು ಬಲಪಡಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಯೋಜನೆಯ ಮಹತ್ವ ಮತ್ತು ವ್ಯಾಪ್ತಿ:
ಸುಮಾರು 6,939 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಸಿದ್ಧಗೊಳ್ಳಲಿರುವ ಈ ಯೋಜನೆಯು, ಕೆಆರ್ ಎಸ್ (KRS) ಜಲಾಶಯದಿಂದ ಹೆಚ್ಚುವರಿಯಾಗಿ 500 ಎಂಎಲ್ ಡಿ (MLD) ನೀರನ್ನು ನಗರಕ್ಕೆ ತರುವ ಗುರಿ ಹೊಂದಿದೆ. ಈ ಯೋಜನೆಯಿಂದ ವಿಶೇಷವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹೊಸದಾಗಿ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಲೇಔಟ್ ಮತ್ತು ಡಾ. ಶಿವರಾಂ ಕಾರಂತ್ ಲೇಔಟ್ ನಿವಾಸಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಅಷ್ಟೇ ಅಲ್ಲದೆ, ಬೆಂಗಳೂರಿನ ಉಪನಗರಗಳಾದ ದೇವನಹಳ್ಳಿ, ಹೊಸಕೋಟೆ, ಆನೇಕಲ್, ಬಿಡದಿ ಮತ್ತು ನೆಲಮಂಗಲ ಪಟ್ಟಣಗಳಿಗೂ ಕಾವೇರಿ ನೀರನ್ನು ವಿಸ್ತರಿಸಲು ಈ 6ನೇ ಹಂತದ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಕೇವಲ ಕುಡಿಯುವ ನೀರಿನ ಯೋಜನೆಯಷ್ಟೇ ಅಲ್ಲದೆ, ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಗೂ ಪೂರಕವಾಗಲಿದೆ.
ಅಧ್ಯಕ್ಷರ ಸೂಚನೆ:
ಸಭೆಯಲ್ಲಿ ಮಾತನಾಡಿದ ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು, “ಬೆಂಗಳೂರಿನ ಜನರಿಗೆ ಗುಣಮಟ್ಟದ ಮತ್ತು ನಿರಂತರ ನೀರಿನ ಪೂರೈಕೆ ಮಾಡುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ 6ನೇ ಹಂತದ ಸಿದ್ಧತಾ ಸಮೀಕ್ಷೆಯು ಅತ್ಯಂತ ನಿರ್ಣಾಯಕವಾಗಿದ್ದು, ತಾಂತ್ರಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಕಾಲಮಿತಿಯಲ್ಲಿ ರೂಪಿಸಬೇಕು,” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಭೆಯು ಯೋಜನೆಯ ಅನುಷ್ಠಾನದ ಮೊದಲ ಮತ್ತು ಪ್ರಮುಖ ಹಂತವಾಗಿದ್ದು, ಸಮೀಕ್ಷೆಯ ವರದಿ ಬಂದ ನಂತರ ಮುಂದಿನ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ. ನಗರದ ನಾಗರಿಕರ ಹಿತದೃಷ್ಟಿಯಿಂದ ಜಲಮಂಡಳಿಯು ಈ ಯೋಜನೆಯನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

