Fri. Jun 5th, 2026

ಕೇಂದ್ರ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಮುಕ್ತ ಅಭಿಯಾನ: ಕರ್ತವ್ಯ ಲೋಪವೆಸಗುವ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆಯ ಎಚ್ಚರಿಕೆ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗವನ್ನು ಕಸಮುಕ್ತವಾಗಿಸಲು ಮತ್ತು ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲು ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕರ್ತವ್ಯಲೋಪಕ್ಕೆ ವರ್ಗಾವಣೆ ಶಿಕ್ಷೆಯ ಎಚ್ಚರಿಕೆ ನೀಡಿದ್ದಾರೆ.

ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದ ನೈರ್ಮಲ್ಯ ಕಾಪಾಡುವಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಬೆಂಗಳೂರು ಕೇಂದ್ರ ಭಾಗವು ನಗರದ ಪ್ರತಿಷ್ಠಿತ ಪ್ರದೇಶಗಳನ್ನು ಒಳಗೊಂಡಿರುವುದರಿಂದ, ಇಲ್ಲಿನ ಕಸ ವಿಲೇವಾರಿ ಪ್ರಕ್ರಿಯೆಯು ಮಾದರಿಯಾಗಿರಬೇಕು. ಈ ನಿಟ್ಟಿನಲ್ಲಿ ಪ್ರತಿ ವಲಯದ ಅಧಿಕಾರಿಗಳು ಪ್ರತಿದಿನದ ಕಸ ವಿಲೇವಾರಿ ಕುರಿತು ಸಮಗ್ರ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಡಿಜಿಎಂ ಹಾಗೂ ಎಜಿಎಂ ಮಟ್ಟದ ಅಧಿಕಾರಿಗಳು ಪ್ರತಿ ಬೀದಿಯಲ್ಲೂ ಪೌರಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ಖುದ್ದಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.

ಬ್ಲ್ಯಾಕ್ ಸ್ಪಾಟ್‌ಗಳ ವಿರುದ್ಧ ಸಮರ:

ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ‘ಬ್ಲ್ಯಾಕ್ ಸ್ಪಾಟ್‌’ಗಳನ್ನು (ಕಸ ಸುರಿಯುವ ಜಾಗ) ಗುರುತಿಸಿ, ಅವುಗಳನ್ನು ತಕ್ಷಣವೇ ತೆರವುಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಕೇವಲ ತೆರವುಗೊಳಿಸುವುದು ಮಾತ್ರವಲ್ಲದೆ, ಆ ಜಾಗಗಳಲ್ಲಿ ಮತ್ತೆ ಕಸ ಬೀಳದಂತೆ ಸಸಿಗಳನ್ನು ನೆಡುವುದು ಅಥವಾ ರಂಗೋಲಿ ಹಾಕುವ ಮೂಲಕ ಶಾಶ್ವತವಾಗಿ ಆ ಪ್ರದೇಶಗಳನ್ನು ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ನಿಯಮ ಉಲ್ಲಂಘಿಸುವ ಸಿಬ್ಬಂದಿಗೆ ಬಿಸಿ:

ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಅಥವಾ ಕರ್ತವ್ಯಕ್ಕೆ ಗೈರಾಗುವ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು. ಅಂತಹವರನ್ನು ತಕ್ಷಣವೇ ವರ್ಗಾವಣೆ ಮಾಡಲಾಗುವುದು ಅಥವಾ ಇಲಾಖಾ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು. ಮನೆ-ಮನೆಗೆ ಬರುವ ಆಟೋ ಟಿಪ್ಪರ್‌ಗಳು ನಿಗದಿತ ಸಮಯಕ್ಕೆ ಬರಬೇಕು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಕಸ ಎಸೆಯದಂತೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದರು.

ಸಭೆಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಸಿಇಒ ಕಾರಿಗೌಡ, ಅಪರ ಆಯುಕ್ತ ಕೆ. ರಂಗನಾಥ್, ಜಂಟಿ ಆಯುಕ್ತ ಹೇಮಂತ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 


Share this with Friends

Related Post